ಗೋಣಿಕೊಪ್ಪಲು, ಜು.೨೫: ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೊಡಗು ಹೆಗ್ಗಡೆ ಸಮಾಜದ ಸಮುದಾಯವು ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಮೀಸಲಾತಿಗೆ ಹೋರಾಟ ಮಾಡುತ್ತಲೇ ಬಂದಿದೆ. ರಾಜಕೀಯ ಮೀಸಲಾತಿ ಪಡೆಯುವುದು ಸಮುದಾಯದ ಹಕ್ಕಾಗಿದೆ.

ಈ ನಿಟ್ಟಿನಲ್ಲಿ ಈ ಹಿಂದೆಯೇ ನಾನು ತಮ್ಮೊಂದಿಗೆ ಚರ್ಚೆ ನಡೆಸಿ ಸಂಬAಧಿಸಿದವರಿಗೆ ವಿವರ ನೀಡಿದ್ದೇನೆ. ಇದರಿಂದ ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನ ಹೆಗ್ಗಡೆ ಸಮಾಜಕ್ಕೆ ರಾಜಕೀಯ ಮೀಸಲಾತಿ ದೊರೆಯಲಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ನೂತನ ಶಾಸಕರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಪೊನ್ನಣ್ಣ, ಈ ಹಿಂದೆ ಸಮಾಜದ ಆಡಳಿತ ಮಂಡಳಿ ನನ್ನನ್ನು ಖುದ್ದಾಗಿ ಭೇಟಿ ಮಾಡಿ ಹೆಗ್ಗಡೆ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಬಗ್ಗೆ ಸುಧೀರ್ಘವಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಜಸ್ಟೀಸ್ ಭಕ್ತವತ್ಸಲಂ ಅವರನ್ನು ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿತ್ತು. ಸಮುದಾಯಕ್ಕೆ ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೆ ಮಾತ್ರ ಮೀಸಲಾತಿ ಲಭ್ಯವಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಗಿತ್ತು. ನಂತರ ಅಗತ್ಯ ಮಾಹಿತಿಗಳನ್ನು ಪಡೆದ ಅವರು, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿ ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಶಿಫಾರಸ್ಸು ಮಾಡಿದ್ದಾರೆ. ಮುಂದಿನ ಸ್ಥಳೀಯ ಚುನಾವಣೆಗೂ ಮುನ್ನ ಹೆಗ್ಗಡೆ ಸಮುದಾಯಕ್ಕೆ ರಾಜಕೀಯ ಮೀಸಲಾತಿ ದೊರೆಯುವ ವಿಶ್ವಾಸ ಇದೆ ಎಂದು ಸಮಾಜ ಬಾಂಧವರಿಗೆ ತಿಳಿಸಿದರು.

ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಮಾಜದ ಉಪಾಧ್ಯಕ್ಷ ಕೊರಕುಟ್ಟಿರ ಸರ ಚಂಗಪ್ಪ, ಸಮುದಾಯ ಬಾಂಧವರ ನಿರಂತರ ಶ್ರಮದಿಂದ ಬಿಟ್ಟಂಗಾಲದಲ್ಲಿ ಸಮಾಜವನ್ನು ನಿರ್ಮಾಣ ಮಾಡಲಾಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದೆ. ವರ್ಷಂಪ್ರತಿ ನಡೆಯುವ ಸಮುದಾಯದ ಕ್ರೀಡಾಕೂಟಕ್ಕೆ ಅನುದಾನದ ಕೊರತೆ ಎದುರಿಸುತ್ತಿದ್ದೇವೆ. ಮುಂದಿನ ಕ್ರೀಡಾಕೂಟಕ್ಕೆ ಸರ್ಕಾರದ ವತಿಯಿಂದ ಅನುದಾನವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.

ರಾಜಕೀಯವಾಗಿ ಮೀಸಲಾತಿ ಇನ್ನೂ ಕೂಡ ದೊರೆತಿಲ್ಲ. ರಾಜಕೀಯವಾಗಿ ತುಳಿತಕ್ಕೆ ಒಳಗಾಗಿದ್ದೇವೆ. ಮೀಸಲಾತಿ ಕೊರತೆಯಿಂದ ಸಮುದಾಯದಿಂದ ಯಾರೂ ಕೂಡ ರಾಜಕೀಯವಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೊಡಗು ಜಿಲ್ಲೆಯಲ್ಲಿರುವ ಹೆಗ್ಗಡೆ ಸಮುದಾಯದವರನ್ನು ಬುಡಕಟ್ಟು ಸಮುದಾಯವೆಂದು ಗುರುತಿಸಬೇಕು. ಹಾಗೂ ಕುಲಶಾಸ್ತç ಅಧ್ಯಯನ ನಡೆಸಬೇಕು. ಜಿಲ್ಲೆಯಲ್ಲಿ ೮ ಸಾವಿರಕ್ಕೂ ಅಧಿಕ ಹೆಗ್ಗಡೆ ಜನಾಂಗದ ಸಮಾಜ ಬಾಂಧವರು ನೆಲೆಸಿದ್ದಾರೆ. ಕುಲಶಾಸ್ತç ಅಧ್ಯಯನಕ್ಕೆ ನಾವು ತಯಾರಿ ನಡೆಸಿದ್ದೇವೆ. ನಮಗೂ ಬುಡಕಟ್ಟು ಸ್ಥಾನಮಾನ ನೀಡುವ ಮೂಲಕ ಸರ್ಕಾರ ಕ್ರಮಕೈಗೊಳ್ಳಬೇಕು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡುವ ಮೂಲಕ ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಿದರು.

ವೇದಿಕೆಯಲ್ಲಿ ಹೆಗ್ಗಡೆ ಸಮಾಜದ ಹಿರಿಯ ನಿರ್ದೇಶಕರಾದ ಮೂರೀರ ಕುಶಾಲಪ್ಪ, ತೋರೆರ ಮುದ್ದಯ್ಯ, ಉಪಸ್ಥಿತರಿದ್ದರು. ಸಮಾಜದ ನಿರ್ದೇಶಕ ನಾಗೇಶ್ ನಿರೂಪಿಸಿ, ಮುದ್ದಯ್ಯ ವಂದಿಸಿದರು. ಜಿಲ್ಲೆಯ ವಿವಿಧ ಭಾಗದಿಂದ ಸಮಾಜ ಬಾಂಧವರು ಭಾಗವಹಿಸಿದ್ದರು.