ಸಿದ್ದಾಪುರ, ಜು. ೨೫: ಗ್ರಾಮ ಪಂಚಾಯಿತಿಗೆ ಸೇರಬೇಕಾದ ಗುಜರಿ ಸಾಮಗ್ರಿಗಳು ನೀರುಘಂಟಿಯೊಬ್ಬರ ಮನೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಸಿಪಿಐಎಂ ಪಕ್ಷದ ಗ್ರಾಮ ಸಮಿತಿ ಒತ್ತಾಯಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯ ದರ್ಶಿ ಹೆಚ್.ಬಿ. ರಮೇಶ್ ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ನೀರುಘಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಎಂಬವರು ಗ್ರಾಮ ಪಂಚಾಯಿತಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಗುಜರಿ ಸಾಮಗ್ರಿಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಶೇಖರಿಸಿ ಇಟ್ಟಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ನೀರುಘಂಟಿಯೊAದಿಗೆ ಕೆಲವು ಗ್ರಾಮ ಪಂಚಾಯಿತಿ ಸದಸ್ಯರುಗಳು ಶಾಮೀಲಾಗಿರುವುದಾಗಿ ಆರೋಪಿಸಿದ ಅವರು ಈ ಬಗ್ಗೆ ಅಭಿವೃದ್ಧಿ ಅಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪಂಚಾಯಿತಿ ಕಚೇರಿ ಎದುರು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಸಿದ್ದಾಪುರ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್ ಮುಸ್ತಫ, ಬೈಜು ಹಾಜರಿದ್ದರು.