ಅದು ೧೯೯೯ನೇ ಇಸವಿಯ ಮೇ ತಿಂಗಳ ಮೊದಲ ದಿವಸವಾಗಿತ್ತು. ದೆಹಲಿಯಲ್ಲಿ ಅಂದಿನ ಎನ್‌ಡಿಎ ಸರಕಾರದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಭಾರತದ ವಾಯುಪಡೆಯ ಮುಖ್ಯಾಧಿಕಾರಿ ಏರ್‌ಚೀಫ್ ಮಾರ್ಷಲ್ ಟಿಪ್ನಿಸ್‌ರವರು ಬಹಳ ಮಹತ್ವದ ಹಾಗೂ ಅತಿಗುಟ್ಟಾಗಿರುವ ವಿಷಯದ ಬಗ್ಗೆ ಚರ್ಚೆ ಮಾಡುತ್ತಿದ್ದರು. ಟಿಪ್ನಿಸ್‌ರವರ ಮಾತುಗಳನ್ನು ಕೇಳುತ್ತಾ ಹೋದಂತೆ ವಾಜಪೇಯಿಯವರ ಮುಖವು ಸಿಟ್ಟಿನಿಂದ ಕೆಂಪಾಗತೊಡಗಿತು. “ಸರಿ, ನೀವು ಯಾವುದೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬಹುದು” ಎಂದು ಅವರು ಆ ಅಧಿಕಾರಿಗೆ ಆದೇಶವನ್ನು ನೀಡಿದರು. ಹೌದು, ಅದೇ ವರ್ಷ ಫೆಬ್ರವರಿಯಲ್ಲಿ ಲಾಹೋರ್ ನಗರದಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಪಾಕಿಸ್ತಾನದವರು ಮುರಿದು ಕಾರ್ಗಿಲ್ ಪ್ರಾಂತ್ಯದ ಗಡಿಯಲ್ಲಿ ತಮ್ಮ ಸೇನೆಯನ್ನು ಜಮಾಯಿಸಿದ್ದರು. ಇದು ವಾಜಪೇಯಿಯವರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾಶ್ಮೀರದಿಂದ ಗಡಿಭಾಗವಾದ ಲೇಹ್ ಮತ್ತು ಸಿಯಾಚಿನ್ ಸ್ಥಳಗಳಿಗೆ ಹೋಗಲು ಇದ್ದ ಒಂದೇ ಒಂದು ಮಾರ್ಗವು ಕಾರ್ಗಿಲ್ ಮೂಲಕವೇ ಆಗಿತ್ತು. ಈ ಮಾರ್ಗಗಳಲ್ಲಿ ಸಾರ್ವಜನಿಕ ವಾಹನಗಳಿಗಿಂತಲೂ ಕೇವಲ ಸೇನಾ ವಾಹನಗಳ ಸಂಚಾರವೇ ಜಾಸ್ತಿಯಾಗಿರುತ್ತದೆ. ಗಡಿಯಂಚಿನ ಲೇಹ್ ಮತ್ತು ಸಿಯಾಚಿನ್ ಪ್ರದೇಶಗಳ ಸೇನಾನೆಲೆಗಳಿಗೆ ದಿನನಿತ್ಯದ ಅಗತ್ಯಗಳಾದ ಆಹಾರ, ಔಷಧ ಮತ್ತು ಅಂಚೆಯ ಪತ್ರಗಳನ್ನು ಇಲ್ಲಿ ಸೇನಾ ವಾಹನಗಳ ಮೂಲಕ ಸಾಗಿಸಲಾಗುತ್ತದೆ. ಅಲ್ಲದೆ ಅನಿವಾರ್ಯವಾಗಿ ಯುದ್ಧಗಳಾದರೆ ಈ ಮಾರ್ಗವಾಗಿಯೇ ಯುದ್ಧ ಸಾಮಗ್ರಿಗಳನ್ನು ಗಡಿಯ ಸೈನಿಕರಿಗೆ ಒಯ್ಯಬೇಕಾಗುತ್ತದೆ.

ಹೀಗೆ ರಾಷ್ಟçದ ಸಾರ್ವಭೌಮತ್ವವನ್ನು ಕಾಪಾಡಲು ಈ ಮಾರ್ಗವು ಇನ್ನಿಲ್ಲದ ಮಹತ್ವವನ್ನು ಪಡೆದುಕೊಂಡಿದೆ. ಇದನ್ನು ವಶಪಡಿಸಿಕೊಂಡರೆ ಅನಂತರ ಭಾರತದೊಂದಿಗೆ ಯುದ್ಧವಾದರೆ ಪಾಕಿಸ್ತಾನಕ್ಕಾಗಲೀ ಚೀನಕ್ಕಾಗಲೀ ಯುದ್ಧವು ಅಷ್ಟೇನೂ ಕಠಿಣವಾಗುವುದಿಲ್ಲ ಮತ್ತು ಲೇಹ್ ಹಾಗೂ ಸಿಯಾಚಿನ್ ಪ್ರದೇಶವನ್ನು ಸುಲಭದಲ್ಲಿ ತನ್ನದಾಗಿಸಿಕೊಳ್ಳಬಹುದು ಎನ್ನುವುದು ಪಾಕಿಸ್ತಾನದ ದೂರದೃಷ್ಟಿಯಾಗಿತ್ತು.

ಕುರಿಗಳನ್ನು ಮೇಯಿಸುವವರ ಮೂಲಕ ಈ ಪ್ರಾಂತ್ಯದಲ್ಲಿ ಮುಜಾಹಿದ್ದೀನ್‌ಗಳು ನೆಲೆಯನ್ನು ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯು ದೊರೆತೊಡನೆ ಭಾರತದ ಗುಪ್ತಚರ ಇಲಾಖೆಯು ಅವರು ಮುಜಾಹಿದ್ದೀನ್‌ಗಳಲ್ಲ, ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರು ಮುಜಾಹಿದ್ದೀನ್ ರೀತಿಯಲ್ಲಿ ನುಗ್ಗುತ್ತಿದ್ದಾರೆ ಎನ್ನುವುದನ್ನು ಕಂಡುಕೊAಡಿತು. ಈ ವಿಷಯವು ರಾಷ್ಟçನಾಯಕರಿಗೆ ತಲುಪಿದೊಡನೆ ಅವರಿಂದ ಈ ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರನ್ನು ತೆರವುಗೊಳಿಸಲು ಅನುಮತಿ ಸಿಕ್ಕಿತು. ಇದಾದ ಕೆಲವೇ ಗಂಟೆಗಳಲ್ಲಿ ಭಾರತೀಯ ರಕ್ಷಣಾಪಡೆಯು ಸೈನ್ಯವನ್ನು ಸಜ್ಜುಗೊಳಿಸಿ ಆ ವೈರಿಗಳನ್ನು ಬಗ್ಗುಬಡಿಯಲು ಸಿದ್ಧತೆಗಳನ್ನು ಮಾಡಿಕೊಂಡಿತು.

ಈ ಕಾರ್ಯಾಚರಣೆಯು ಅಷ್ಟೇನೂ ಸುಲಭವಾಗಿರಲಿಲ್ಲ. ಮೈಕೊರೆಯುವ ಚಳಿಯೊಂದಿಗೆ ಎತ್ತರದ ರಣಾಂಗಣವಾದುದರಿAದ ಉಸಿರಾಡಲೂ ಗಾಳಿಯ ಕೊರತೆಯೂ ಇದ್ದಿತು. ಇದರೊಂದಿಗೆ ಭಾರತದ ವಾಯುಪಡೆಯವರಿಗೆ ದೂರದ ಬೆಟ್ಟಗಳಲ್ಲಿ, ಗಿರಿಕಂದರಗಳಲ್ಲಿ ಅಡಗಿ ಕುಳಿತಿರುವ ಪಾಕ್ ಸೈನಿಕರನ್ನು ಗುರುತಿಸಿ ಹೊಡೆದುರುಳಿಸಲು ಸೂಕ್ತವಾದ ರೆಡಾರ್‌ಗಳೂ ಇರಲಿಲ್ಲ. ಆದರೂ ಕೇವಲ ಒಂದು ವಾರದ ಸೂಕ್ತ ಮತ್ತು ಕಠಿಣವಾದ ತರಬೇತಿಯೊಂದಿಗೆ ಭಾರತದ ವಾಯುಪಡೆಯು ಸಫೇದ್ ಸಾಗರ್ ಎನ್ನುವ ಹೆಸರನ್ನು ಇರಿಸಿಕೊಂಡು ಮಿಗ್ ೨೧ ಹಾಗೂ ಮಿಗ್ ೨೯ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿತು. ಇದರೊಂದಿಗೆ ಎಷ್ಟೋ ವರ್ಷಗಳಿಂದ ವಾಯುಪಡೆಯಲ್ಲಿ ಸೇವೆಸಲ್ಲಿಸುತ್ತಿದ್ದ ಕ್ಯಾನ್‌ಬೆರಾ ಬಾಂಬರ್ ವಿಮಾನಗಳನ್ನೂ ಈ ಯುದ್ಧದಲ್ಲಿ ಬಳಸಿಕೊಳ್ಳಲಾಯಿತು. ಈ ಯುದ್ಧಕ್ಕೆ ಮೂಲ ಕಾರಣ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್. ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಶರೀಫ್‌ರಿಗೂ ಯುದ್ಧದ ವಿಷಯವನ್ನು ಈ ಸೇನಾಧಿಕಾರಿ ತಿಳಿಸದೆ ಗೌಪ್ಯವಾಗಿ ಇರಿಸಿಕೊಂಡಿದ್ದರು!

ಯಾವುದೇ ಕಾರಣಕ್ಕೂ ಪಾಕಿಸ್ತಾನದ ಗಡಿಯೊಳಗೆ ನಮ್ಮ ವಿಮಾನಗಳು ನುಸುಳಬಾರದೆಂಬ ನಿಯಮವನ್ನೂ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಇಲ್ಲಿ ಸಮಸ್ಯೆಗಳಿದ್ದದ್ದು ಸುಮಾರು ೧೮,೦೦೦ ಅಡಿ ಎತ್ತರದ ಟೈಗರ್ ಹಿಲ್. ರಣಾಂಗಣದಲ್ಲಿ ಹೊಕ್ಕಿರುವ ಪಾಕಿಸ್ತಾನಿ ಪಡೆಗಳ ಬಂದೂಕ ಮತ್ತು ಟಾಂಕರ್‌ಗಳನ್ನು ನಿಖರವಾಗಿ ಗುರುತಿಸಿ ಅವನ್ನು ನಿರ್ನಾಮ ಮಾಡುವುದಾಗಿತ್ತು.

ಈ ಸಮಯದಲ್ಲಿ ಆಪತ್ಭಾಂದವನAತೆ ಭಾರತಕ್ಕೆ ನೆರವನ್ನು ನೀಡಿದ್ದು ಇಸ್ರೇಲ್ ಎಂಬ ದೇಶ. ಅದು ಅತ್ಯಾಧುನಿಕ ರೆಡಾರ್ ಉಪಕರಣಗಳನ್ನು ಭಾರತಕ್ಕೆ ನೀಡಿ ಸಹಕರಿಸಿತಲ್ಲದೆ ಹೆರೋನ್ ಹೆಸರಿನ ಡ್ರೋನ್ ನೀಡಿ ಸಹಕರಿಸಿತು ಮತ್ತು ನಮ್ಮ ಸೈನಿಕರಿಗೆ ಅದರ ಬಳಕೆಯ ಬಗ್ಗೆ ಸೂಕ್ತ ತರಬೇತಿಯನ್ನೂ ನೀಡಿತು.

ಸುಮಾರು ಅರವತ್ತು ದಿವಸಗಳ ಅನಂತರ ಭಾರತದ ಪಡೆಗಳು ಟೈಗರ್ ಹಿಲ್ ರಣಾಂಗಣವನ್ನು ಬಹುತೇಕ ವಶಪಡಿಸಿಕೊಂಡವು. ಆಗ ಅದೇ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನದ ಮೇಲೆ ಒತ್ತಡವನ್ನು ಹೇರಿ ಒಳನುಗ್ಗಿದ್ದ ಪ್ರದೇಶದಿಂದ ಕಾಲುತೆಗೆಯುವಂತೆ ತಿಳಿಸಿದರು. ಒಟ್ಟಿನಲ್ಲಿ ಭಾರತವು ಎಪ್ಪತ್ತೆöÊದು ದಿವಸಗಳ ಅನಂತರ ಸಂಘರ್ಷಕ್ಕೆ ತೆರೆಯನ್ನು ಎಳೆಯಿತು.

ಈ ಯುದ್ಧದಲ್ಲಿ ಭಾರತಕ್ಕೆ ವಿಜಯವೇನೋ ದೊರೆಯಿತು. ಆದರೆ ಭಾರತದ ೫೨೭ ಸೈನಿಕರು ವೀರಮರಣವನ್ನು ಹೊಂದಿದರಲ್ಲದೆ ೧೬೮೭ ಸುಭಟರು ತೀವ್ರಸ್ವರೂಪದ ಗಾಯಕ್ಕೆ ಒಳಗಾದರು. ಭಾರತದ ಎರಡು ಮಿಗ್ ವಿಮಾನಗಳು ಮತ್ತೊಂದು ಹೆಲಿಕಾಪ್ಟರ್ ಪತನಕ್ಕೆ ಒಳಗಾಯಿತು. ಭಾರತಕ್ಕೆ ಒಟ್ಟು ೧೨೦೦ ಕೋಟಿ ರೂಪಾಯಿಗಳಷ್ಟು ಹಣವೂ ಖರ್ಚಾಯಿತು. ಪಾಕಿಸ್ತಾನದ ಕಡೆಯಿಂದ ೧೫೦೦ ಸೈನಿಕರು ಮರಣಹೊಂದಿದರಲ್ಲದೆ ಎಣಿಕೆಗೆ ಸಿಗದಷ್ಟು ಸೈನಿಕರು ಗಾಯಾಳುಗಳಾದರು.

ಕಾರ್ಗಿಲ್ ಸಮೀಪದ ದ್ರಾಸ್ ಎಂಬಲ್ಲಿ ಈ ಯುದ್ಧದಲ್ಲಿ ಹುತಾತ್ಮರಾದ ಎಲ್ಲ ಯೋಧರ ಹೆಸರನ್ನು ಸ್ಮಾರಕವಾಗಿ ಕೆತ್ತಲಾಗಿದೆ. ಯುದ್ಧದ ಅನಂತರ ನಾಲ್ವರು ಹುತಾತ್ಮರಿಗೆ ಪರಮವೀರ ಚಕ್ರವನ್ನು ನೀಡಿ ಗೌರವವನ್ನು ಸಲ್ಲಿಸಲಾಗಿದೆ.

- ಕಿಗ್ಗಾಲು ಎಸ್. ಗಿರೀಶ್, ಮೂರ್ನಾಡು. ಮೊ. ೯೧೪೧೩ ೯೫೪೨೬