ಮಡಿಕೇರಿ, ಜು. ೨೪: ಪ್ರಸಕ್ತ ವರ್ಷ ಮುಂಗಾರು ಮಳೆ ಕ್ಷೀಣ ಎಂಬAತೆ ಈತನಕ ಇದ್ದಂತಹ ಪರಿಸ್ಥಿತಿ ಇದೀಗ ಮರೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ಹಿಂದಿನAತೆ ಪುಷ್ಯ ಮಳೆ ತನ್ನ ಪ್ರತಾಪವನ್ನು ತೋರುತ್ತಿದ್ದು, ವಾಯು-ವರುಣನ ರಭಸಕ್ಕೆ ಕಾವೇರಿ ತವರು ಕೊಡಗು ಜಿಲ್ಲೆ ಮೈಯ್ಯೊಡ್ಡಿ ನಿಂತಿದೆ. ವ್ಯಾಪಕ ಗಾಳಿ-ಮಳೆಯಿಂದಾಗಿ ಜಿಲ್ಲೆಯಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡAತ್ತಿದ್ದು, ಇದೇ ರೀತಿ ಮಳೆ ತನ್ನ ರಭಸ ಮುಂದುವರಿಸಿದ್ದಲ್ಲಿ ಏನಾಗಲಿದೆ ಎಂಬ ಆತಂಕವನ್ನು ಜಿಲ್ಲೆಯ ಜನರು ಎದುರಿಸುವಂತಾಗಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆ ನಲುಗುವಂತಾಗಿದ್ದು, ನದಿ-ತೊರೆಗಳು ತುಂಬಿ ಹರಿಯಲಾರಂಭಿಸಿದ್ದರೆ, ವಿವಿಧ ಜಲಪಾತಗಳು ಭೋರ್ಗರೆಯುತ್ತಿದೆ. ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು, ಕೆಲವೆಡೆ ರಸ್ತೆ ಸಂಪರ್ಕಗಳೂ ಕಡಿತಗೊಳ್ಳುತ್ತಿವೆ. ಜಿಲ್ಲೆಯ ಬಹುತೇಕ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಗಾಳಿಯ ರಭಸವೂ ಹೆಚ್ಚಿರುವುದರಿಂದ ಮರ-ವಿದ್ಯುತ್ ಕಂಬಗಳು ಧರೆಗುರುಳಿರುವುದು ಮುಂದುವರಿಯುತ್ತಿದ್ದು, ವಿದ್ಯುತ್ ವ್ಯವಸ್ಥೆಗೆ ಧಕ್ಕೆಯಾಗಿದೆ. ಇದನ್ನು ಸರಿಪಡಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಮತ್ತೆ ಮತ್ತೆ ಅಲ್ಲಲ್ಲಿ ಅನಾಹುತಗಳು ಉಂಟಾಗುತ್ತಿವೆ. ಕಾವೇರಿ ಸೇರಿದಂತೆ ಎಲ್ಲಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಇನ್ನೂ ಕೆಲ ದಿನಗಳ ಕಾಲ ಈಗಿನ ಪರಿಸ್ಥಿತಿಯೇ ಮುಂದುವರಿದಲ್ಲಿ ಜಲ ದಿಗ್ಭಂದನದ ಆತಂಕ ಎದುರಾಗುವ ಸಂಭವವಿದೆ.
ಗಾಳಿ-ಮಳೆಯಿಂದಾಗಿ ಅಲ್ಲಲ್ಲಿ ಬರೆ ಕುಸಿತ, ಮರ ಬೀಳುವುದು, ಮನೆಗಳಿಗೆ ಹಾನಿ ಮತ್ತಿತರ ಹಲವು ಸಮಸ್ಯೆಗಳಿಗೂ ಜನರು ಈಡಾಗುತ್ತಿದ್ದಾರೆ.
ಸಾಮಾನ್ಯವಾಗಿ ರಸ್ತೆ ಸಂಪರ್ಕ ಕಡಿತವಾಗುವ ಭಾಗಮಂಡಲ-ಮಡಿಕೇರಿ ರಸ್ತೆ,
(ಮೊದಲ ಪುಟದಿಂದ) ಭಾಗಮಂಡಲ-ನಾಪೋಕ್ಲು ರಸ್ತೆಯಲ್ಲೂ ಆತಂಕದ ಪರಿಸ್ಥಿತಿಯಿದೆ. ನಾಪೋಕ್ಲು, ಬೇತ್ರಿ, ಕೊಂಡAಗೇರಿ, ಸಿದ್ದಾಪುರ, ಕರಡಿಗೋಡು ಭಾಗದಲ್ಲಿ ಕಾವೇರಿಯ ರಭಸ ಹೆಚ್ಚಿರುವುದರಿಂದ ಕುಶಾಲನಗರ ವ್ಯಾಪ್ತಿಯ ತಗ್ಗು ಪ್ರದೇಶದ ಜನರ ದುಗುಡ ಇದೀಗ ಹೆಚ್ಚುತ್ತಿದೆ. ಆದರೆ ಭಾನುವಾರದಂದು ಕಂಡು ಬಂದಿದ್ದ ಮಳೆಯ ಆರ್ಭಟ ಸೋಮವಾರದಂದು ತುಸು ಇಳಿಮುಖಗೊಂಡAತಿದ್ದು ಆತಂಕ ಒಂದೆಡೆಯಿದ್ದರೂ ಜನರು ತುಸು ನಿರಾಳರಾಗುವಂತಾಗಿದೆ. ಆದರೂ ಮಳೆಗಾಲದ ಅವಧಿ ಇನ್ನಷ್ಟು ಇದ್ದು, ಜನರು ನೈಸರ್ಗಿಕ ಪರಿಸ್ಥಿತಿಯನ್ನು ಎದುರಿಸಲೇಬೇಕಾಗಿದೆ.
ಎರಡನೇಯ ದಿನವೂ ೪ ಇಂಚಿಗೂ ಅಧಿಕ ಮಳೆ
ಶನಿವಾರ ಬೆಳಿಗ್ಗೆಯಿಂದ ಭಾನುವಾರ ಬೆಳಿಗ್ಗೆ ತನಕ ೨೪ ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೪ ಇಂಚಿಗೂ ಅಧಿಕ ಮಳೆಯಾಗಿತ್ತು. ಇದು ಎರಡನೇಯ ದಿನವೂ ಮುಂದುವರಿದಿದ್ದು, ಸೋಮವಾರ ಬೆಳಿಗ್ಗೆ ತನಕ ಮತ್ತೆ ಜಿಲ್ಲೆಯಲ್ಲಿ ಸರಾಸರಿ ೪.೭೫ ಇಂಚು ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ೬.೯೩ ಇಂಚುಗಳಷ್ಟು ಭಾರೀ ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಸರಾಸರಿ ೪.೨೬ ಇಂಚು, ವೀರಾಜಪೇಟೆ ತಾಲೂಕಿನಲ್ಲಿ ೩.೦೫ ಇಂಚು ಮಳೆಯಾಗಿದ್ದರೆ, ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲೂ ೪.೯೦ ಇಂಚಿನಷ್ಟು ಧಾರಾಕಾರ ಮಳೆ ಸುರಿದಿದೆ.
ಶಾಂತಳ್ಳಿಗೆ ೮.೬೦ ಇಂಚು ಮಳೆ
ಶಾಂತಳ್ಳಿ ಹೋಬಳಿಗೆ ಕಳೆದ ೨೪ ಗಂಟೆಗಳಲ್ಲಿ ೮.೬೦ ಇಂಚಿನಷ್ಟು ಭಾರೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಮಡಿಕೇರಿ ಕಸಬಾ ೬.೩೪, ನಾಪೋಕ್ಲು ೬.೦೪, ಭಾಗಮಂಡಲ ೭.೮೯ ಸಂಪಾಜೆ ಹೋಬಳಿಯಲ್ಲಿ ೭.೪೬ ಇಂಚುಗಳಷ್ಟು ಭಾರೀ ಮಳೆ ಕಳೆದ ೨೪ ಗಂಟೆಗಳಲ್ಲಿ ಸುರಿದಿದೆ.
ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಕಸಬಾ ೨.೭೩, ಹುದಿಕೇರಿ ೩.೫೦, ಶ್ರೀಮಂಗಲ ೩.೬೪, ಪೊನ್ನಂಪೇಟೆ ೩.೪೦, ಅಮ್ಮತ್ತಿ ೨.೭೮, ಬಾಳೆಲೆ ಹೋಬಳಿಯಲ್ಲಿ ೨.೨೪ ಇಂಚು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಕಸಾಬ ೫.೩೬, ಶನಿವಾರಸಂತೆ ೩.೫೮, ಕೊಡ್ಲಿಪೇಟೆ ೩.೧೨, ಕುಶಾಲನಗರ ೧.೮೮ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೩.೦೪ ಇಂಚು ಮಳೆಯಾಗಿದೆ.
ರಾಜ್ಯ ಹೆದ್ದಾರಿ ಮೇಲೆ ಬಿದ್ದ ಮರ
ಭಾರೀ ಗಾಳಿ-ಮಳೆಗೆ ಮರಸಹಿತ ಬರೆಕುಸಿದ ಪರಿಣಾಮ ಕೆಲಕಾಲ ಮಡಿಕೇರಿ-ಮಂಗಳೂರು ಸಂಚಾರ ಸ್ಥಗಿತಗೊಂಡಿತು.
ಮದೆನಾಡು ಬಳಿಯ ಕರ್ತೋಜಿಯಲ್ಲಿ ಈ ಘಟನೆ ನಡೆದಿದ್ದು, ಇದರಿಂದ ನೂರಾರು ವಾಹನಗಳ ರಸ್ತೆ ಮಧ್ಯೆ ಸಿಲುಕಿ ತೊಂದರೆ ಉಂಟಾಯಿತು. ಸ್ಥಳಕ್ಕೆ ಎನ್.ಡಿ.ಆರ್.ಎಫ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ದೌಡಾಹಿಸಿ ಕಾರ್ಯಾಚರಣೆ ಕೈಗೊಂಡು ಮರ ತೆರವುಗೊಳಿಸಿದರು.
ಈ ಸಂದರ್ಭ ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ್, ತಹಶೀಲ್ದಾರ್ ಕಿರಣ್, ರಾಷ್ಟಿçÃಯ ಹೆದ್ದಾರಿ ವಿಭಾಗದ ಅಭಿಯಂತರರು ಹಾಜರಿದ್ದರು.
ಭಾಗಮಂಡಲ ಜಲಾವರಣ ಮುಂದುವರಿಕೆ ಮೇಲ್ಸೇತುವೆ ಮೂಲಕ ಪಾದಚಾರಿಗಳ ನಡೆಭಾಗಮಂಡಲ : ಸತತ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರು ಭರ್ತಿಯಾಗಿದ್ದು, ಭಾಗಮಂಡಲ-ಮಡಿಕೇರಿ, ಭಾಗಮಂಡಲ-ನಾಪೋಕ್ಲು ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಬಿರುಸಿನ ಮಳೆಯಿಂದಾಗಿ ಬೆಟ್ಟ ಶ್ರೇಣಿಗಳಿಂದ ಹರಿ ಬರುತ್ತಿರುವ ನೀರು ತ್ರಿವೇಣಿ ಸಂಗಮದಲ್ಲಿ ಸಂಗ್ರಹಗೊAಡು ಪಟ್ಟಣ ಜಲಾವೃತವಾಗಿದೆ. ನಿನ್ನೆ ದಿನ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮೆಟ್ಟಿಲುಗಳ ಮೇಲೆ ನೀರು ಉಕ್ಕಿ ಹರಿದಿತ್ತು. ಇಂದು ರಾತ್ರಿಗಿಂತ ಒಂದು ಅಡಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಮಳೆಯಿಂದಾಗಿ ಸಂತೆಯ ದಿನವಾದ ಇಂದು ಭಾಗಮಂಡಲದಲ್ಲಿ ಜನಸಾಮಾನ್ಯರು ಸಂತೆಗೆ ಬರಲು ಪರದಾಡಿದರು. ಸುತ್ತಲೂ ಜಲಾವೃತವಾದುದರಿಂದ ಕರಿಕೆ ಜಂಕ್ಷನ್ ಬಳಿ ಲಕ್ಕಿ ಸ್ಟಾರ್ ಸಮೀಪ ವ್ಯಾಪಾರಸ್ಥರು ಸಂತೆ ನಡೆಸಿದರು. ಜನರು ನಡೆದುಕೊಂಡು ಹೋಗಿ ಸಾಮಾಗ್ರಿಗಳನ್ನು ಖರೀದಿಸಿದರು. ಸುತ್ತಮುತ್ತಲಿನ ಗ್ರಾಮಗಳ ಜನರು ಮೇಲ್ಸೇತುವೆ ಮೇಲೆ ನಡೆದು ಹೋಗಿ (ಮೊದಲ ಪುಟದಿಂದ) ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಮೇಲ್ ಸೇತುವೆಯ ಮೂಲಕ ಬೆರಳೆಣಿಕೆಯ ಪ್ರವಾಸಿಗರು ಕೂಡ ನಡೆದು ಬಂದು ಭಗಂಡೇಶ್ವರ ದೇವಾಲಯಕ್ಕೆ ತೆರಳಿ ಬಳಿಕ ಆಟೋ ಮುಖಾಂತರ ತಲಕಾವೇರಿಗೆ ತೆರಳುತ್ತಿದ್ದದು ಕಂಡು ಬಂತು. ಅಯ್ಯಂಗೇರಿಗೆ ತೆರಳುವವರು ಕೂಡ ಸೇತುವೆ ಇಳಿದು ನಡೆದುಕೊಂಡೇ ಹೋದರು.
ಸತತ ಮಳೆಯಿಂದ ತೊಂದರೆಗೊಳಗಾದವರಿಗೆ ಕಂದಾಯ ಇಲಾಖೆ ವತಿಯಿಂದ ಕಾಶಿ ಮಠ ಹಾಗೂ ಕೆವಿಜಿ ವಿದ್ಯಾಸಂಸ್ಥೆಯ ಐಟಿಐ ಕಾಲೇಜಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈಗಾಗಲೇ ೨೫ಕ್ಕೂ ಅಧಿಕ ಮಂದಿಗೆ ನೋಟೀಸ್ ನೀಡಲಾಗಿದ್ದು ಅಗತ್ಯ ಬಂದರೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಮಳೆಯಿಂದಾಗಿ ಹಾನಿ ಸಂಭವಿಸಬಹುದಾದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ನೋಟೀಸ್ ಜಾರಿ ಮಾಡಲಾಗಿದೆ.
ಎರಡು ಮೂರು ದಿನಗಳಿಂದ ಭಾಗಮಂಡಲ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಮೊಬೈಲ್ ನೆಟ್ವರ್ಕ್ ಸಮಸ್ಯೆಯೂ ಕಾಡುತ್ತಿದೆ. ಒಟ್ಟಿನಲ್ಲಿ ಬಿರುಸಿನ ಮಳೆ ಜನಸಾಮಾನ್ಯರಿಗೆ ಸಮಸ್ಯೆಗಳ ಸರಮಾಲೆಯನ್ನು ತಂದೊಡ್ಡಿದೆ. ತಲಕಾವೇರಿಗೆ ಇಂದು ೧೦.೫೬ ಇಂಚು ಹಾಗೂ ಭಾಗಮಂಡಲಕ್ಕೆ ೭.೭ ಇಂಚು ಮಳೆಯಾಗಿದೆ.
ಭಗಂಡೇಶ್ವರ ದೇಗುಲಕ್ಕೆ ಅರ್ಚಕರಾದಿಯಾಗಿ ಕೆಲವು ಭಕ್ತರು, ಸ್ಥಳೀಯರು ಹಿಂಬಾಗಿಲಿನಿAದ ತೆರಳಬೇಕಾಯಿತು. ಕೆಲವು ಪ್ರವಾಸಿಗರು ಭಾಗಮಂಡಲ ಸನಿಹ ನೀರಿಲ್ಲದೆಡೆ ತಮ್ಮ ವಾಹನಗಳನ್ನು ನಿಲ್ಲಿಸಿ ಮೇಲ್ಸೇತುವೆ ಮೂಲಕ ನಡೆದು ಆ ಬದಿಯಲ್ಲಿ ಬಾಡಿಗೆ ವಾಹನದಲ್ಲಿ ತಲಕಾವೇರಿಗೆ ತೆರಳಿದ ಸನ್ನಿವೇಶವೂ ಕಂಡು ಬಂದಿತು. ಮೇಲ್ಸೇತುವೆಯಿಂದ ಪಾದಚಾರಿಗಳು ತೆರಳುತ್ತಿರುವ ಹಿನ್ನೆಲೆ ದೋಣಿ ವ್ಯವಸ್ಥೆ ಮಾಡಲಾಗಿದೆ. ಸೇತುವೆ ಕೆಲಸ ಇನ್ನೂ ಅಪೂರ್ಣವಾಗಿರುವ ಹಿನ್ನೆಲೆ ಕೆಲವು ಪಾದಚಾರಿಗಳು ಆಯತಪ್ಪಿ ಕೆಳಗೆ ಬಿದ್ದು ಮತ್ತೆ ಎದ್ದು ನಡೆದಾಡುತ್ತಿದ್ದ ಸಂದರ್ಭವೂ ಗೋಚರವಾಯಿತು. -ಸುನಿಲ್ ಕುಯ್ಯಮುಡಿ