ಪೊನ್ನಂಪೇಟೆ, ಜು. ೨೪: ಕೊಡಗು ಮತ್ತು ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪೆರುಂಬಾಡಿ- ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಇದೀಗ ನಡೆಯುತ್ತಿರುವ ಕೇಬಲ್ ಚರಂಡಿ ಕಾಮಗಾರಿಯು ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ವಾಹನಗಳ ಸಂಚಾರಕ್ಕೆ ಧÀಕ್ಕೆಯಾಗುತ್ತಿದೆ. ಈ ಕಾಮಗಾರಿಯಿಂದಾಗಿ ಹೆದ್ದಾರಿ ಮೂಲಕ ಸಂಚರಿಸುವ ಭಾರೀ ವಾಹನಗಳು ಅಲ್ಲಲ್ಲಿ ರಸ್ತೆ ಬದಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವ ದೃಶ್ಯ ಇದೀಗ ಸಾಮಾನ್ಯವಾಗಿದೆ.

ಬಿಎಸ್‌ಎನ್‌ಎಲ್ ಸಂಪರ್ಕ ವನ್ನು ಕೇರಳದಿಂದ ಕೊಡಗು ಜಿಲ್ಲೆಗೆ ಜೋಡಿಸಲು ಕೇಬಲ್ ಚರಂಡಿ ಕಾಮಗಾರಿಯನ್ನು ಮಳೆಗಾಲದ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಯು ಗಡಿ ಪ್ರದೇಶವಾದ ಕೂಟುಹೊಳೆ ಭಾಗದಲ್ಲಿ ಪೂರ್ಣಗೊಂಡು ಮಾಕುಟ್ಟ ಮೂಲಕ ವಿರಾಜಪೇಟೆಯತ್ತ ಸಾಗಿ ಬರುತ್ತಿದೆ. ಕೇಬಲ್ ಅಳವಡಿಸಲು ಹೆದ್ದಾರಿಯ ರಸ್ತೆ ಬದಿಯಲ್ಲಿ ಯಂತ್ರದ ಮೂಲಕ ಚರಂಡಿ ತೋಡಲಾಗುತ್ತಿದ್ದು, ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕುವುದು ಅನಿವಾರ್ಯವಾಗಿದೆ. ರಸ್ತೆಗೆ ಬಿದ್ದ ಮಣ್ಣಿನಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಈ ಹೆದ್ದಾರಿಯಲ್ಲಿರುವ ಹಲವು ತಿರುವುಗಳಲ್ಲಿ ಚರಂಡಿ ಕಾಮಗಾರಿ ಯಿಂದ ಭಾರೀ ವಾಹನಗಳು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದೆ. ಎದುರಿನಿಂದ ಬರುವ ವಾಹನಗಳಿಗೆ ಜಾಗ ಬಿಟ್ಟುಕೊಡುವ ಸಂದರ್ಭದಲ್ಲಿ ವಾಹನಗಳನ್ನು ಸ್ವಲ್ಪ ತಿರುಗಿಸಿದರೆ ಸಹಜವಾಗಿಯೇ ಟೈಯರುಗಳು ರಸ್ತೆ ಬದಿಯ ಕೇಬಲ್ ಚರಂಡಿಗೆ ಜಾರುತ್ತವೆ. ಹೀಗಾಗಿ ಆ ವಾಹನಗಳು ಮುಂದಕ್ಕೆ ಚಲಿಸಲಾಗದೆ ಚರಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ಸಿಲ್ವರ್ ಮರಗಳನ್ನು ಕೇರಳಕ್ಕೆ ಸಾಗಿಸುವ ಲಾರಿಗಳು ಕೂಡ ಈ ರಸ್ತೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಕಾಣ ಬಹುದಾಗಿದೆ. ಘಾಟ್ ರಸ್ತೆಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ಜಾಗೃತೆ ಪಾಲಿಸಬೇಕಿದ್ದರೂ ಅದನ್ನು ನಿರ್ಲಕ್ಷಿಸಿ ಅವೈಜ್ಞಾನಿಕ ಕೇಬಲ್ ಚರಂಡಿ ಕೆಲಸದಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರು ಸಂಬAಧಿಸಿದವರಿಗೆ ಹಿಡಿಶಾಪ ಹಾಕುತ್ತಾ ವಾಹನ ಚಾಲಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಾಕುಟ್ಟ ಘಾಟ್ ರಸ್ತೆಯಲ್ಲಿ ಮಳೆಗಾಲದಲ್ಲಿ ವಾಹನ ಚಾಲಿಸುವುದೇ ಚಾಲಕರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಅದರಲ್ಲೂ ನಿರಂತರ ಮಳೆಯಾಗುತ್ತಿರುವಾಗ ಕೇಬಲ್ ಚರಂಡಿ ಕಾಮಗಾರಿಯಿಂದಾಗಿ ಚಾಲಕರು ದೊಡ್ಡ ಸವಾಲಿನ ಜೊತೆಗೆ ಜೀವ ಭಯವನ್ನು ಎದುರಿಸುವಂತಾಗಿದೆ. ಯಾವುದೇ ಘಾಟ್ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಯಾವುದೇ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ. ಹೀಗಿದ್ದರೂ ಮಾಕುಟ್ಟ ಹೆದ್ದಾರಿಯಲ್ಲಿ ಕೇಬಲ್ ಚರಂಡಿ ಕಾಮಗಾರಿಗೆ ಅವಕಾಶ ನೀಡಿರುವುದು ಯಾವ ಮಾನದಂಡದಲ್ಲಿ ಎಂಬುದು ಈ ರಸ್ತೆಯಲ್ಲಿ ಸಂಚರಿಸುವ ಬಹುತೇಕ ಚಾಲಕರ ಪ್ರಶ್ನೆಯಾಗಿದೆ.

-ವಿಶೇಷ ವರದಿ: ರಫೀಕ್ ತೂಚಮಕೇರಿ