ಸಿದ್ದಾಪುರ, ಜು. ೨೪ : ಮಾಂಸದ ಊಟಕ್ಕಾಗಿ ಸಹೋದರರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಅವರೆಗುಂದ ಹಾಡಿಯಲ್ಲಿ ನಡೆದಿದೆ.

ರಮೇಶ್ (೩೬) ಮೃತ ದುರ್ಧೈವಿ. ಭಾನುವಾರದಂದು ಕರಡಿಗೋಡು ಗ್ರಾಮದ ಅವರೆಗುಂದ ಹಾಡಿ ನಿವಾಸಿ ಗಂಗಮ್ಮ (ಮೃತನ ತಾಯಿ) ಎಂಬವರ ಮನೆಯಲ್ಲಿ ಹಂದಿ ಮಾಂಸ ಸಾರಿನ ವಿಚಾರದಲ್ಲಿ ಕುಡಿದ ಮತ್ತಿನಲ್ಲಿ ರಮೇಶನೊಂದಿಗೆ ಅಣ್ಣಂದಿರಾದ ಸುರೇಶ ಮತ್ತು ಶಿವಣ್ಣ ನಡುವೆ ಜಗಳ ಪ್ರಾರಂಭವಾಗಿ ಪರಸ್ಪರ ಕೈಕೈ ಮಿಲಾಯಿಸಿದ್ದು ಈ ಸಂದರ್ಭದಲ್ಲಿ ಆರೋಪಿಗಳಾದ ಶಿವಣ್ಣ ಮತ್ತು ಸುರೇಶ ಕತ್ತಿಯಿಂದ ರಮೇಶನ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ರಕ್ತ ಸ್ರಾವದೊಂದಿಗೆ ರಮೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮದ್ಯದ ಅಮಲಿನಲ್ಲಿ ಯಾರಿಗೂ ಸಾವನ್ನಪ್ಪಿರುವುದು ತಿಳಿದಿಲ್ಲ. ಸೋಮವಾರ ಬೆಳಿಗ್ಗೆ ರಕ್ತದ ಮಡುವಿನಲ್ಲಿದ್ದ ರಮೇಶನನ್ನು ಕಂಡ ಗಂಗಮ್ಮ ಕೂಡಲೇ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಆರೋಪಿಗಳಾದ ಸುರೇಶ (೬೦) ಮತ್ತು ಶಿವಣ್ಣ (೪೮) ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಪ್ರಕರಣ ದಾಖಲಿಸಿದ್ದಾರೆ.

ಮೃತ ರಮೇಶ್ ಪತ್ನಿಯಿಂದ ದೂರವಿದ್ದು, ಈರ್ವರು ಮಕ್ಕಳನ್ನು ಅಗಲಿದ್ದಾರೆ. ಆರೋಪಿತರು ಹಾಗೂ ಮೃತ ವ್ಯಕ್ತಿ ಒಂದೆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನಾ ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.