ಚೆಯ್ಯಂಡಾಣೆ, ಜು. ೨೪. ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಾನೂನು ಉಲ್ಲಂಘಿಸಿದವರಿಗೆ ಆಗುವ ಶಿಕ್ಷೆಯ ಬಗ್ಗೆ ಮಾಹಿತಿ ನೀಡಿದರು.ಶಿಕ್ಷಣದ ಮಹತ್ವದ ಮೂಲಕ ಗಳಿಸಿಕೊಳ್ಳುವ ಜ್ಞಾನ, ಕಟ್ಟಿಕೊಳ್ಳುವ ಬದುಕು, ರೂಢಿಸಿಕೊಳ್ಳಬೇಕಾದ ಮೌಲ್ಯಗಳು, ಮಾನವೀಯತೆಯ ಮನೋಭಾವದ ಬಗ್ಗೆ ತಿಳಿಸಿದರು. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಮತ್ತು ಅದನ್ನು ಬಳಸುವ, ಸರಬರಾಜು ಮಾಡುವವರಿಗೆ ಶಿಕ್ಷೆ ಮತ್ತು ದಂಡಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ಮನವರಿಕೆ ಮಾಡಿಕೊಟ್ಟರು. ಅವರು ಮೊಬೈಲ್ ಫೋನ್ ಬಳಸುವುದರಿಂದ ಆಗುವ ಸಾಧಕ ಬಾದಕಗಳ ಬಗ್ಗೆ ಕೂಡ ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳು ಕಾನೂನನ್ನು ಪರಿಪಾಲಿಸಿ ಉಲ್ಲಂಘನೆ ಮಾಡದೆ ಶಿಸ್ತಿನಿಂದ ಶಿಕ್ಷಣವನ್ನು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು. ಪೊಲೀಸ್ ಸಿಬ್ಬಂದಿ ಲವಕುಮಾರ್ ಮಾತನಾಡಿ ವಿದ್ಯಾರ್ಥಿಗಳು ರಸ್ತೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಲೇಜಿನ ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸುಸಂಸ್ಕೃತರಾಗಿ ಬಾಳಿ ಎಂದು ಕಿವಿಮಾತು ಹೇಳಿದ ಅವರು ಕಾನೂನನ್ನು ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆಗೆ ಗುರಿಯಾಗುತ್ತೀರಿ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲೆ ವಿಜಿತ, ಉಪ ಪ್ರಾಂಶುಪಾಲ ಶಿವಣ್ಣ, ಎಸ್ ಡಿಎಂಸಿ ಸದಸ್ಯರಾದ ಬೊಳ್ಳೆಪಂಡ ಹರೀಶ್, ಶಶಿ ಮಂದಣ್ಣ, ಅಬ್ದುಲ್ ಖಾದರ್, ಮುಜೀಬ್, ಅಶ್ರಫ್, ಉಪನ್ಯಾಸಕರು, ಶಿಕ್ಷಕರು,ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿ ದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಕೆ.ಬಿ. ಉಷಾರಾಣಿ ನಿರೂಪಿಸಿದರು. ಪ್ರಭಾರ ಪ್ರಾಂಶುಪಾಲೆ ವಿಜಿತ ಸ್ವಾಗತಿಸಿ, ಪ್ರಭಾರ ಉಪಪ್ರಾಂಶುಪಾಲ ಶಿವಣ್ಣ ವಂದಿಸಿದರು.