ಸೋಮವಾರಪೇಟೆ, ಜು. ೨೪: ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣದ ಸಂಕಲ್ಪ ನನ್ನದಾಗಿದ್ದು, ಇದಕ್ಕೆ ಜನತೆ ಸಹಕಾರ ನೀಡಬೇಕು. ಯುವ ಸಮುದಾಯವನ್ನು ದೇಶದ ಶಕ್ತಿಯನ್ನಾಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುವ ಪ್ರಯತ್ನ ಮಾಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಡಾ. ಮಂಥರ್ ಗೌಡ ಅಭಿಮಾನಿ ಬಳಗದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಡಿಕೇರಿ ಕ್ಷೇತ್ರದ ಜನರಿಂದಾಗಿ ನಾನು ಶಾಸಕನಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧವಾಗಿದ್ದು, ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣ, ಶಾಲಾ ಕಾಲೇಜುಗಳಲ್ಲಿ ಉತ್ತಮ ಪರಿಸರ ನಿರ್ಮಾಣ, ಪ್ರತಿ ಗ್ರಾಮಗಳಲ್ಲಿ ಯುವಕ ಸಂಘಗಳ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಮುಖಂಡ ಹೆಚ್.ಆರ್. ಸುರೇಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರನ್ನು ಸೋಲಿಸಿದ ಸೋಮವಾರಪೇಟೆ ಕ್ಷೇತ್ರದ ಜನತೆ ಈ ಬಾರಿ ಅಭಿವೃದ್ಧಿಗಾಗಿ ಡಾ. ಮಂಥರ್ ಗೌಡ ಅವರನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕಿದೆ ಎಂದರು.
ವಿ.ಪಿ. ಶಶಿಧರ್ ಮಾತನಾಡಿ, ಎಂಎಲ್‌ಸಿ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದ ಕಾಂಗ್ರೆಸ್ ಈ ಬಾರಿ ದಿಗ್ವಿಜಯ ಸಾಧಿಸಿದೆ ಎಂದರಲ್ಲದೆ, ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಎಂ. ಲೋಕೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಪ್ರಮುಖರಾದ ನಾಗೇಂದ್ರ ಬಾಬು, ಎಸ್.ಎಂ. ಚಂಗಪ್ಪ, ಕೆ.ಎ. ಯಾಕೂಬ್, ಬಿ.ಈ. ಜಯೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಡಾ. ಮಂಥರ್ ಗೌಡ ಅಭಿಮಾನಿ ಬಳಗದ ಅಧ್ಯಕ್ಷ ಸುಜಿತ್, ಉಪಾಧ್ಯಕ್ಷ ಅಬ್ದುಲ್ ರಜಾಕ್ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು.