ಕೂಡಿಗೆ, ಜು. ೨೪: ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆಯ ತೀರ ದುರಸ್ತಿಗೊಂಡು ಅಪಾಯದ ಮಟ್ಟದಲ್ಲಿದೆ.
ಕಳೆದ ೧೦ ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ರೂ.೫೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಈ ತೂಗು ಸೇತುವೆಯು ದುರಸ್ತಿ ಕಾಣದೆ ಮೂಲೆಗುಂಪಾಗಿದೆ.
ತೂಗುಸೇತುವೆಯು ಕೊಡಗು-ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕಣಿವೆ ತೂಗುಸೇತುವೆ ಶಿಥಿಲವಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ೨೦೧೮ರಲ್ಲಿ ಉಂಟಾದ ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿದ ತೂಗುಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದರೂ ಇದೇ ಸೇತುವೆ ಮೇಲೆ ಜೀವದ ಹಂಗು ತೊರೆದು ಎರಡು ಜಿಲ್ಲೆಗಳ ನಿವಾಸಿಗಳು, ನೂರಾರು ವಿದ್ಯಾರ್ಥಿಗಳು ದಿನಂಪ್ರತಿ ಸಂಚರಿಸುತ್ತಿದ್ದಾರೆ.
ಪ್ರವಾಹದಿAದ ಎರಡು ತುಂಡಾಗಿದ್ದ ಸೇತುವೆಯನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿದ ಬಳಿಕ ಸಂಬAಧಿಸಿದವರ ನಿರ್ಲಕ್ಷö್ಯ ದಿಂದ ಈ ಸೇತುವೆ ಹೆಚ್ವಿನ ದುರಸ್ತಿ ಕಾಣದೆ ಸೊರಗಿ ಹೋಗಿದೆ. ಸಂಪೂರ್ಣ ಒಂದು ಕಡೆಗೆ ವಾಲಿದಂತಿರುವ ಸೇತುವೆಯ ಸರಳುಗಳು, ತಡೆಗೋಡೆಯ ಮೆಸ್, ಅಡಿಪಾಯದ ನೆಟ್ ಬೋಲ್ಟ್ಗಳು ಶಿಥಿಲವಾಗಿದ್ದು, ಕಂಬಿಗಳು ಅಲ್ಲಲ್ಲಿ ನೇತಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಅಪಾಯದ ಅರಿವಿಲ್ಲದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಸೇತುವೆ ಮೇಲೆ ಅಡ್ಡಾಡುತ್ತಿದ್ದಾರೆ. ‘ಪ್ರೀ ವೆಡ್ಡಿಂಗ್’ ಫೋಟೋ ಶೂಟ್ಗಳಂತಹ ಚಟುವಟಿಕೆಗಳು ಹೆಚ್ಚಾಗಿ ಈ ಸೇತುವೆ ಮೇಲೆ ನಡೆಯುತ್ತಿದ್ದು ಹೆಚ್ಚಿನ ಅನಾಹುತ ಸಂಭವಿಸಿದರೆ ಹೊಣೆ ಯಾರು? ಎಂಬ ಪ್ರಶ್ನೆ ಮೂಡಿದೆ.
ಪರ್ಯಾಯ ಮಾರ್ಗದಲ್ಲಿ ಸುತ್ತಿ ಬಳಸಿ ಬರಲು ಹಿಂದೇಟು ಹಾಕುವ ನದಿಯಂಚಿನ ಗ್ರಾಮಸ್ಥರು ತಮ್ಮ ದೈನಂದಿನ ವಹಿವಾಟು, ಕೆಲಸ ಕಾರ್ಯಗಳಿಗೆ, ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇದೇ ಸೇತುವೆ ಅವಲಂಬಿಸಿದ್ದು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ದುಸ್ಥಿತಿ ನಿರ್ಮಾಣಗೊಂಡಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲು ಜಿಲ್ಲಾಡಳಿತ ಗಮನಹರಿಸಬೇಕೆಂಬುದು ಜನರ ಆಗ್ರಹವಾಗಿದೆ.
ಕೆ.ಕೆ. ನಾಗರಾಜಶೆಟ್ಟಿ