ಮಡಿಕೇರಿ, ಜು. ೨೩: ಹೊದ್ದೂರು ಶ್ರೀ ಶಾಸ್ತ-ಈಶ್ವರ ದೇವಸ್ಥಾನ ಸಮಿತಿಯ ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ವಿವಿಧ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಮಡಿಕೇರಿ ಸಾಮಾಜಿಕ ಅರಣ್ಯ ವಲಯ ಅರಣ್ಯ ಅಧಿಕಾರಿ ಮಯೂರ್ ಕಾರ್ವೇಕರ್ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ದರ್ಶಿನಿ ಎಂ.ಜಿ. ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮಯೂರ್ ಅವರು, ದೇವರಕಾಡಿನಲ್ಲಿ ದೇವಸ್ಥಾನ ಇರುವುದರಿಂದ ಪರಿಸರ ಸ್ವಚ್ಛ ವಾಗಿರುತ್ತದೆ. ರೈತರು ಆರ್.ಟಿ.ಸಿ.ಯ ಮೂಲಕ ಸಸ್ಯ ಕ್ಷೇತ್ರದಿಂದ ಉಪಯುಕ್ತ ಗಿಡಗಳನ್ನು ರಿಯಾಯಿತಿ ದರದಲ್ಲಿ ಪಡೆದು ನೆಡುವಂತಾಗಬೇಕು ಎಂದರು.

ದರ್ಶಿನಿ ಮಾತನಾಡಿ, ಕೊಡಗಿನಲ್ಲಿರುವ ಹಲವಾರು ಮೀಸಲು ಅರಣ್ಯದಲ್ಲಿ ಉಪಯುಕ್ತ ಗಿಡ-ಮರಗಳನ್ನು ನೆಡುವ ಮೂಲಕ ವನ್ಯಪ್ರಾಣಿಗಳಿಗೆ ಆಹಾರ ಸಿಗುವಂತಹ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ದೇವಾಲಯದ ಆವರಣ ಸುತ್ತ ೩೦೦ ವಿವಿಧ ತಳಿಯ ಗಿಡಗಳನ್ನು ನೆಡಲಾಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಉಪಾಧ್ಯಕ್ಷರಾದ ಚೌರೀರ ರಮೇಶ್ ಕಾವೇರಿಯಪ್ಪ, ಅಮ್ಮಣಂಡ ಯು. ಪೂಣಚ್ಚ, ಖಜಾಂಚಿ ಚೆಟ್ಟಿಮಾಡ ಸುನಿ ಲಕ್ಷö್ಮಣ, ಹೊದ್ದೂರು ವಿ.ಎಸ್.ಎಸ್.ಎನ್. ಬ್ಯಾಂಕ್‌ನ ವ್ಯವಸ್ಥಾಪಕ ಕೂಡಂಡ ಎಂ. ಸೋಮಣ್ಣ, ಅರ್ಚಕ ಅಮಿತ್, ಕೂಡಂಡ ಕುಟುಂಬದ ಪಟ್ಟೆದಾರ ಕೆ.ಎಂ. ಪೆಮ್ಮಯ್ಯ ಹಾಗೂ ಸಮಿತಿ ಸದಸ್ಯರುಗಳು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಸ್ವಾಗತಿಸಿ, ನಿರೂಪಿಸಿದರು. ಕೂಡಂಡ ರವಿ ಮೊಣ್ಣಪ್ಪ ವಂದಿಸಿದರು.