ಶ್ರೀ ವೆಂಕಟರಮಣ ಸ್ವಾಮಿ ಕುಲದೇವರಾಗಿರುವ ಪ್ರಮುಖವಾಗಿ ಗೌಡ ಮತ್ತು ಇತರ ಜನಾಂಗದವರು ಮಾಡುವ ವೆಂಕಟರಮಣ ಸ್ವಾಮಿಯ ಪೂಜೆಗೆ ಹರಿಸೇವೆ ಅಂತ ಹೇಳುತ್ತಾರೆ. ಹರಿಸೇವೆಯನ್ನು ಕುಟುಂಬದವರೆಲ್ಲಾ ಸೇರಿ ಪ್ರತಿ ವರ್ಷ ಮಾಡಬೇಕು. ಆದರೆ, ಕುಟುಂಬದಿAದ ಕುಟುಂಬಕ್ಕೆ ಹರಿಸೇವೆ ಮಾಡುವ ರೀತಿ ಬೇರೆ ಬೇರೆಯಾಗಿದೆ. ಕೆಲವು ಕುಟುಂಬದವರು ಪ್ರತಿ ವರ್ಷ ಹರಿಸೇವೆ ಮಾಡುತ್ತಾರೆ. ಇನ್ನು ಕೆಲವು ಕುಟುಂಬದಲ್ಲಿ ಎರಡು ವರ್ಷಕ್ಕೊಮ್ಮೆ, ಮೂರು ವರ್ಷಕ್ಕೊಮ್ಮೆ, ಐದು ವರ್ಷಕ್ಕೊಮ್ಮೆ ಹರಿಸೇವೆ ಮಾಡುತ್ತಾರೆ. ಅಲ್ಲದೆ, ಕೆಲವು ವ್ಯಕ್ತಿಗಳು ತಮ್ಮ ಕಷ್ಟ ಕಾಲದಲ್ಲಿ ಹರಕೆ ಮಾಡಿಕೊಂಡಿದ್ದರೆ ಹರಿಸೇವೆ ಮಾಡುವುದುಂಟು.
ಗೊನೆ ಕಡಿದು ಮುಹೂರ್ತ : ಹರಿಸೇವೆಯನ್ನು ಹೆಚ್ಚಾಗಿ ಶನಿವಾರವೇ ಮಾಡುವುದು ರೂಢಿ. ಸಾಧಾರಣವಾಗಿ ಬೆಳಿಗ್ಗೆ ಒಂಭತ್ತು ಗಂಟೆಗೆ ಶುರು ಮಾಡಿ ಮಧ್ಯಾಹ್ನ ಮೂರು ಗಂಟೆಯೊಳಗೆ ಮುಗಿಸುವುದು ವಾಡಿಕೆ. ಇನ್ನು ಕೆಲವು ಕುಟುಂಬಗಳಲ್ಲಿ ಅವರವರ ಅನುಕೂಲಕ್ಕೆ ತಕ್ಕಂತೆ ರಾತ್ರಿ ಸಹ ಮಾಡುವುದುಂಟು. ಶನಿವಾರ ಅಲ್ಲದೆ ವಿಷ್ಣುವಿನ ವಾರವಾದ ಬುಧವಾರ ಸಹ ಹರಿಸೇವೆಯನ್ನು ಮಾಡುತ್ತಾರೆ. ಕುಟುಂಬದವರೆಲ್ಲಾ ಸೇರಿ ಅಥವಾ ಹರಕೆ ಹೇಳಿಕೊಂಡವರು ಹರಿಸೇವೆಗೆ ದಿನಾಂಕವನ್ನು ಗೊತ್ತು ಮಾಡುತ್ತಾರೆ. ಕುಟುಂಬದ ಹಿರಿಯರು ಅಥವಾ ಭಕ್ತನಾಗಿ ನಿಲ್ಲುವವರು ಹರಿಸೇವೆಗೆ ಒಂದು ವಾರಕ್ಕೆ ಮೊದಲು ಸ್ನಾನಮಾಡಿ ಶುಚಿರ್ಭೂತರಾಗಿ ದೇವರನ್ನು ನೆನೆದು, ಹರಿಸೇವೆಗೆ ಬಾಳೆಗೊನೆಯನ್ನು ಗೊತ್ತಾದ ಸ್ಥಳದಿಂದ ಕಡಿದು ತಂದು ದೇವರ ಮುಡಿಪು ಇರುವ ಜಾಗ ಅಥವಾ ಅಟ್ಟದಲ್ಲಿ ಗೊನೆಯನ್ನು ತೂಗು ಹಾಕುತ್ತಾರೆ. ಇದಕ್ಕೆ "ಗೊನೆ ಕಡಿಯುವುದು" ಎಂದು ಹೇಳುತ್ತಾರೆ. ಗೊನೆ ಕಡಿಯುವಾಗ ಕುಟುಂಬದ ಗಂಡಸರು ಸಹ ಜೊತೆಯಲ್ಲಿ ಇರುತ್ತಾರೆ. ಹೀಗೆ ಗೊನೆ ಕಡಿದ ವ್ಯಕ್ತಿ ಹರಿಸೇವೆ ಮುಗಿಯುವ ತನಕ ಮಾಂಸಾಹಾರ ತಿನ್ನುವಂತಿಲ್ಲ, ಸೂತಕದ ಮನೆಗೆ ಹೋಗುವಂತಿಲ್ಲ, ಸಾವು, ತಿಥಿಗಳಿಗೆ ಹೋಗುವಂತಿಲ್ಲ. ಒಂದು ವಾರ ಶುದ್ಧ ಮುದ್ರಿಕೆಯಲ್ಲಿರಬೇಕೆಂಬುದು ನಿಯಮ. ಹರಿಸೇವೆಯನ್ನು ನಡೆಸಲು ಬ್ರಾಹ್ಮಣ ಇಲ್ಲವೆ ದಾಸನನ್ನು ಗೊತ್ತು ಮಾಡುತ್ತಾರೆ. ಸಾಧಾರಣವಾಗಿ ದಾಸನೇ ಹರಿಸೇವೆಯಲ್ಲಿ ಪೂಜೆ ಮಾಡುವುದು ವಾಡಿಕೆ. ಹರಿಸೇವೆಯ ಆಮಂತ್ರಣವನ್ನು ಆಹ್ವಾನ ಪತ್ರಿಕೆ ಅಥವಾ ಖುದ್ದಾಗಿ ಹೋಗಿ ಊರಿನರನ್ನು, ನೆಂಟರಿಷ್ಟರನ್ನು, ಕೊಟ್ಟ ಹೆಣ್ಣು ಮಕ್ಕಳು ಮತ್ತು ಅವರ ಸಂಸಾರದವರನ್ನು ಮತ್ತಿತರರನ್ನು ಕರೆಯುತ್ತಾರೆ. ಹರಿಸೇವೆಗೆ ಬರುವಾಗ ಎಲ್ಲರೂ ಹಣ್ಣುಕಾಯಿ ತರುವುದು, ಮನೆಯಿಂದ ಕೊಟ್ಟ ಹೆಣ್ಣು ಮಕ್ಕಳು ಎಣ್ಣೆ ತರುವುದು ಪದ್ಧತಿ.
ದೇವರ ಗುಂಡ : ಹರಿಸೇವೆಯ ದಿನ ಕುಟುಂಬದ ಐನ್ಮನೆ, ದೊಡ್ಡಮನೆ, ಮೂಲ ಮನೆ ಅಥವಾ ಮುಡಿಪು ಇಡುವ ಮನೆಯಲ್ಲಿ ಭಕ್ತರೆಲ್ಲಾ ಸೇರುತ್ತಾರೆ. ದಾಸ ಮತ್ತು ಭಕ್ತರು ಸೇರಿ ದೇವರ ಗುಡಿಯನ್ನು ಕಟ್ಟಿ ಅಲಂಕಾರ ಮಾಡುತ್ತಾರೆ. ದೇವರ ಗುಡಿಗೆ ‘‘ಗುಂಡ’’ ಎಂದು ಕರೆಯುತ್ತಾರೆ. ಹರಿಸೇವೆಯಲ್ಲಿ ಪೂಜೆ ಮಾಡಲು ಬ್ರಾಹ್ಮಣ ಅಥವಾ ದಾಸ ಮತ್ತು ತಿರುಳಕಾರ ಅಥವಾ ದರ್ಶನಕಾರರನ್ನು ಕರೆಸಿರುತ್ತಾರೆ. ದೇವರ ಗುಂಡವನ್ನು ಬಾಳೆಯ ದಿಂಡಿನ ಒಳಭಾಗದ ಪಟ್ಟೆಯಿಂದ ಕಲಾತ್ಮಕವಾಗಿ ಮಾಡುತ್ತಾರೆ. ಕುಟುಂಬದ ಲೆಕ್ಕದಲ್ಲಿ ಒಂದು ಅಥವಾ ಜೋಡಿ ಗುಂಡವನ್ನು ಕಟ್ಟಿಸುತ್ತಾರೆ ಮತ್ತು ಹರಕೆ ಮಾಡಿಕೊಂಡ ಕುಟುಂಬದವರು ಅವರ ಸ್ವಂತ ಖರ್ಚಿನಲ್ಲಿ ಗುಂಡವನ್ನು ಕಟ್ಟಿಸುತ್ತಾರೆ. ಹರಕೆ ಮಾಡಿಕೊಂಡವರು ಗುಂಡದ ಖರ್ಚು ಅಲ್ಲದೆ, ಊಟದ ಖರ್ಚಿನ ಸ್ವಲ್ಪ ಭಾಗವನ್ನು ಕೊಡುತ್ತಾರೆ. ಗುಂಡದ ಹರಕೆ ಹೇಳಿಕೊಂಡವರು, ಒಂದು ಕೋಳಿ, ಏಳು ಸೇರು ಅಕ್ಕಿ, ಏಳು ತೆಂಗಿನಕಾಯಿ, ಒಂದು ಮಣ್ಣಿನ ದೀಪ, ಒಂದು ಚಾಪೆ, ಒಂದು ಹೂಮಾಲೆ, ಒಂದು ತುಳಸಿ ಮಾಲೆ, ಒಂದು ಎಳೆನೀರು, ಒಂದು ಕಳಸದ ಚೊಂಬು, ಅಗರಬತ್ತಿ, ಎಣ್ಣೆ ಇತ್ಯಾದಿ ಕೊಡಬೇಕು. ಪೂಜೆಯನ್ನು ಗೊತ್ತು ಮಾಡಿದ ದಿನ ಮೊದಲಿಗೆ ಭಕ್ತರಿಗೆ ಫಲಹಾರ ಕೊಡುತ್ತಾರೆ. ಮತ್ತೆ ಅವರಿಗೆಲ್ಲಾ ಸ್ನಾನ ಮಾಡಲು ಎಣ್ಣೆ ಕೊಡುತ್ತಾರೆ. ಅವರೆಲ್ಲಾ ಸ್ನಾನ ಮಾಡಿ ಬಂದ ಮೇಲೆ ಅಟ್ಟದಲ್ಲಿ ಕಟ್ಟಿರುವ ಬಾಳೆಗೊನೆಯನ್ನು ಮತ್ತು ಮುಡಿಪು ಭಂಡಾರವನ್ನು ಕುಟುಂಬದ ಹಿರಿಯರು, ಬ್ರಾಹ್ಮಣ ಅಥವಾ ದಾಸ ಮತ್ತು ಭಕ್ತರೆಲ್ಲಾ ಸೇರಿ ಶಂಖ, ಜಾಗಟೆಯೊಟ್ಟಿಗೆ ಹೋಗಿ ಬಿಚ್ಚಿ ತಂದು ಗುಂಡದ ಎದುರು ಇಡುತ್ತಾರೆ. ನಂತರ ಪೂಜೆ ಆರಂಭವಾಗುತ್ತದೆ. ಬ್ರಾಹ್ಮಣ ಅಥವಾ ದಾಸ ವಿಧಿಪ್ರಕಾರ ಪೂಜೆ ಮಾಡಿ ಕೊನೆಯಲ್ಲಿ ಮಹಾಮಂಗಳಾರತಿ ಮಾಡುತ್ತಾರೆ. ಇದಕ್ಕೆ ಮಹಾಪೂಜೆ ಎನ್ನುತ್ತಾರೆ. ಆಗ ಗಂಧ, ಧೂಪಾದಿ, ಶಂಖ ಜಾಗಟೆ ಬಾರಿಸಿಕೊಂಡು ನೆರೆದವರೆಲ್ಲಾ ‘‘ಶ್ರೀ ವೆಂಕಟರಮಣ ಸ್ವಾಮಿ ದೇವರ ಪಾದಾರವಿಂದಕ್ಕೆ ಗೋವಿಂದಾನ್ ಗೋವಿಂದಾ ಗೋವಿಂದ’’ ಎಂದು ಹೇಳುತ್ತಾರೆ. ಆಗ ದರ್ಶನಕಾರನ ಮೇಲೆ ದೇವರ ದರ್ಶನವಾಗುತ್ತದೆ. ದೇವರು ಬಂದು ಕುಟುಂಬದಲ್ಲಿ ನಡೆದಿರುವ ತಪ್ಪುಗಳು, ದೋಷಗಳು ಇದ್ದರೆ ಅಶುದ್ಧವಾಗಿದ್ದರೆ ಹೇಳುತ್ತಾರೆ. ಎಲ್ಲರಿಗೂ ಆಶೀರ್ವಾದ ಮಾಡಿ ಒಕ್ಕಣೆ ನೀಡುತ್ತಾರೆ. ಆಗ ಕುಟುಂಬದವರು, ಬಂದಿರುವ ನೆಂಟರುಗಳು ತಮಗೆ ಇರುವ ಕಷ್ಟಗಳನ್ನು ದರ್ಶನ ಬಂದವರಲ್ಲಿ ಹೇಳುತ್ತಾರೆ. ಆಗ ಅವರು ಪರಿಹಾರ ಹೇಳುತ್ತಾರೆ.
ಕೆಂಚಿರಾಯನ ಪೂಜೆ : ನಂತರ ಪೂಜೆಗೆ ಸೇರಿದವರು ಎಲ್ಲಾ ಭಕ್ತಿಯ ಕಾಣಿಕೆ ಅಥವಾ ಹರಕೆ ಕಾಣಿಕೆಯನ್ನು ಭಂಡಾರಕ್ಕೆ ಹಾಕಿ ಪ್ರಸಾದವನ್ನು ತೆಗೆದುಕೊಳ್ಳುತ್ತಾರೆ. ಪ್ರಸಾದ ಎಂದರೆ ಅವಲಕ್ಕಿ, ಸಕ್ಕರೆ, ತುಪ್ಪ, ಕಬ್ಬು, ಮಾದ್ರುಳಿ ಸೇರಿಸಿದ ಮಿಶ್ರಣ. ಅಲ್ಲದೆ, ಪಾನಕ ಕೊಡುತ್ತಾರೆ. ನೀರಿಗೆ ಬೆಲ್ಲ ಅಥವಾ ಸಕ್ಕರೆ, ಒಳ್ಳೆಮೆಣಸು ಪುಡಿ ಸೇರಿಸಿ ಪಾನಕ ತಯಾರಿಸಿರುತ್ತಾರೆ. ಪೂಜೆಗೆ ಕೊಟ್ಟವರಿಗೆ ತೆಂಗಿನಕಾಯಿ ಗಡಿ, ಬಾಳೆಹಣ್ಣು, ಕುಂಕುಮ, ಪುಷ್ಪ ಕೊಡುತ್ತಾರೆ. ನಂತರ ಬಂದವರೆಲ್ಲಾ ಸಸ್ಯಾಹಾರಿ ಊಟ ಮಾಡುತ್ತಾರೆ. ಹರಿಸೇವೆ ಮುಗಿದ ನಂತರ ‘‘ಕೆಂಚಿರಾಯನ’’ ಪೂಜೆ ನಡೆಯುತ್ತದೆ. ಕೆಂಚಿರಾಯ ಅಂದರೆ ವೆಂಕಟರಮಣ ಸ್ವಾಮಿಯ ಧೂತ. ಆಗ ಗುಂಡಕ್ಕೆ ಬಾಳೆಎಲೆ ಮುಚ್ಚಿ ಇಡುತ್ತಾರೆ. ಗುಂಡದಿAದ ಸ್ವಲ್ಪ ದೂರದ ಅಂಗಳದಲ್ಲಿ ಜಾಗವನ್ನು ಶುದ್ಧಿಗೊಳಿಸಿ ಒಂದು ಕಲ್ಲು ಇಟ್ಟು ಕೋಳಿ ಮತ್ತು ಆಡನ್ನು ಬಲಿ ಕೊಡುತ್ತಾರೆ. ಇದಕ್ಕೆ ಕೆಂಚಿರಾಯನಿಗೆ ಬೇಟೆ ಒಪ್ಪಿಸುವುದು ಎನ್ನುತ್ತಾರೆ.
ಆಗ ದರ್ಶನಕಾರನಿಗೆ ಬಲಿ ಕೊಡುವುದು ಕಾಣದಂತೆ ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಬಲಿ ಕೊಟ್ಟ ಜಾಗದಲ್ಲಿ ಭತ್ತದ ಹೊಟ್ಟು ಹಾಕುತ್ತಾರೆ. ನಂತರ ದರ್ಶನಕಾರನನ್ನು ಹೊರಗೆ ಬಿಡುತ್ತಾರೆ. ಅವರ ಮೈಮೇಲೆ ಕೆಂಚಿರಾಯನ ಆವಾಹನೆಯಾಗಿರು ತ್ತದೆ. ದರ್ಶನಕಾರ ಕಿರುಚುತ್ತಾ ಓಡಿ ಬಂದು ಬಲಿ ಕೊಟ್ಟ ಜಾಗದಲ್ಲಿ ಬಿದ್ದು ಹೊರಳಾಡಿ ರಕ್ತವನ್ನು ನೆಕ್ಕಲು ನೋಡುತ್ತಾರೆ. ಆಗಲೂ ಬಂದ ಭಕ್ತರು, ಕುಟುಂಬದವರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಪರಿಹಾರ ಕೇಳುತ್ತಾರೆ.
ಪೂಜೆ ಎಲ್ಲಾ ಮುಗಿದ ನಂತರ ಬಲಿ ಕೊಟ್ಟ ಕೋಳಿ ಮತ್ತು ಆಡನ್ನು ಮಾಂಸ ಮಾಡಿ ಸಾರು ಮಾಡಿ ಭಕ್ತರು ರೊಟ್ಟಿ ಮಾಡಿ ಎಡೆ ಹಾಕುತ್ತಾರೆ. ಆಮೇಲೆ ಮೊದಲು ಭಕ್ತರೆಲ್ಲಾ ಊಟ ಮಾಡಿದ ನಂತರ, ಮನೆಯವರು ಹಾಗೂ ನೆಂಟರು ಎಲ್ಲರಿಗೂ ಊಟ ಕೊಡುತ್ತಾರೆ. ಎಲ್ಲಾ ಮುಗಿದ ನಂತರ ಗುಂಡವನ್ನು ತೆಗೆದು ವಾಲಗದೊಂದಿಗೆ ಎಲ್ಲಾ ಸೇರಿ ಹೊತ್ತುಕೊಂಡು ಹೋಗಿ ಹಾಲು ಬರುವ ಅಥವಾ ಫಲದ ಮರದ ಬುಡದಲ್ಲಿ ಇಡುತ್ತಾರೆ. ಅಲ್ಲಿಗೆ ಹರಿಸೇವೆ ಸಮಾಪ್ತಿಯಾಗುತ್ತದೆ.
ತಿರುಪತಿಗೆ ಮುಡಿಪು : ಭಂಡಾರಕ್ಕೆ ಬಿದ್ದ ಹಣವನ್ನು ಲೆಕ್ಕ ಮಾಡಿ ಮುಡುಪಿಗೆ ಹಾಕಿ ಇಡುತ್ತಾರೆ. ಇದನ್ನು ತಿರುಪತಿ ವೆಂಕಟರಮಣನ ಭಂಡಾರಕ್ಕೆ ಒಪ್ಪಿಸಲೇಬೇಕು. ಕೆಲವರು ಹಣವನ್ನು ಅಂಚೆ ಮುಖಾಂತರ ಮನಿಆರ್ಡರ್ ಮಾಡಿ ತಿರುಪತಿಗೆ ಕಳುಹಿಸು ತ್ತಾರೆ. ಸಾಧಾರಣವಾಗಿ ಹರಿಸೇವೆ ಮಾಡುವುದಕ್ಕೆ ಮುಂಚಿತವಾಗಿ ಕುಟುಂಬದ ಕೆಲವರು ಗೊನೆ ಕಡಿದ ನಂತರ ತಿರುಪತಿಗೆ ಹೋಗಿ ಭಂಡಾರದಲ್ಲಿರುವ ಹಣವನ್ನು ತಿರುಪತಿಯಲ್ಲಿ ಹುಂಡಿಗೆ ಹಾಕಿ ಬರುತ್ತಾರೆ. ತಿರುಪತಿಯಿಂದ ತಂದ ಪ್ರಸಾದವನ್ನು ಫಲದ ಮರದಲ್ಲಿ ಕಟ್ಟಿ ಇಡುತ್ತಾರೆ. ಹರಿಸೇವೆಯ ದಿನ ಪ್ರಸಾದವನ್ನು ಎಲ್ಲರಿಗೂ ಹಂಚುತ್ತಾರೆ. ತಿರುಪತಿಗೆ ಹೋಗುವಾಗ ತಗಲುವ ಖರ್ಚಿಗೆ ಭಂಡಾರದ ಹಣವನ್ನು ಉಪಯೋಗಿಸಬಹುದೆಂದು ಹೇಳುತ್ತಾರೆ. ಆದರೆ ಉಳಿದ ಎಲ್ಲಾ ಹಣವನ್ನು ಭಂಡಾರಕ್ಕೆ ಹಾಕಲೇಬೇಕು. ಒಂದು ಪೈಸೆ ಸಹ ಉಳಿಸಿಕೊಳ್ಳಬಾರದು. ಹಾಗೆ ವಾಪಸ್ ಬರುವಾಗ ತಮ್ಮ ಸ್ವಂತ ದುಡ್ಡನ್ನು ಖರ್ಚು ಮಾಡಬೇಕು. ಆದರೆ ಸಾಧಾರಣವಾಗಿ ಎಲ್ಲರೂ ಅವರವರ ಖರ್ಚಲ್ಲೇ ಹೋಗಿ ಬರುತ್ತಾರೆ. ಕುಟುಂಬದಿAದ ಕುಟುಂಬಕ್ಕೆ ವಿಧಾನದಲ್ಲಿ ಕೆಲವು ವ್ಯತ್ಯಾಸವಿರ ಬಹುದು.
-ಲಲಿತಾ ಕಟ್ರತನ, ಮಡಿಕೇರಿ
ಮೊ :೭೨೦೪೬೭೫೯೨೫