ವೀರಾಜಪೇಟೆ, ಜು. ೨೩: ವೀರಾಜಪೇಟೆಯ ಅಮ್ಮತ್ತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣ ಇಲಖೆಯ ಸಮನ್ವಯಾಧಿಕಾರಿ ವನಜಾಕ್ಷಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು.
ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಶಿಸ್ತಿನಿಂದ ಕಲಿತಾಗ ಸಮಾಜದಲ್ಲಿ ಒಳ್ಳೆಯ ಸ್ಥಾನವನ್ನು ಗಳಿಸಬಹುದು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು, ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಸಧೃಡತೆ ಸಾಧ್ಯವಾಗಲಿದೆ. ಉತ್ತಮ ವಿದ್ಯಾರ್ಜನೆ ಮಾಡುವುದರೊಂದಿಗೆ ಪೋಷಕರಿಗೂ, ಶಾಲೆಗೂ ಕೀರ್ತಿ ತರುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕರ್ನಲ್ ಕೆ.ಡಿ. ಸುಬ್ಬಯ್ಯ ವಹಿಸಿದ್ದರು. ಶಿಕ್ಷಣ ಇಲಾಖೆಯ ಬಿ.ಆರ್.ಪಿ. ಅಜಿತ ಚಂದ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಸೋಮಣ್ಣ, ಬೋಜಿ ಸುಬ್ಬಯ್ಯ, ಆಡಳಿತ ಮಂಡಳಿಯ ವ್ಯವಸ್ಥಾಪಕ ಗಣಪತಿ, ಖಜಾಂಚಿ, ಸುಬ್ರಮಣಿ, ಕುಶಾಲಪ್ಪ, ಪ್ರಕಾಶ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.
ವಿದ್ಯಾರ್ಥಿಗಳಾದ ನೂತನ್ಯ ಹಾಗೂ ಸುಶ್ಮಿತಾ ಪ್ರಾರ್ಥಿಸಿದರು. ಬಿ.ಪಿ. ರಾಜೇಗೌಡ ನಿರೂಪಿಸಿದರೆ, ಶಾಲಾ ಮುಖ್ಯೋಪಾಧ್ಯಾಯ ದೊಡ್ಡ ತಮ್ಮಯ್ಯ, ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.