ಮಡಿಕೇರಿ, ಜು. ೨೩: ಕೊಡಗು ಜಿಲ್ಲೆಯಾದ್ಯಂತ ಇದೀಗ ಮುಂಗಾರಿನ ಅಬ್ಬರ ಜೋರಾಗಿದೆ. ಪುಷ್ಯ ಮಳೆ ಆರಂಭದ ಬಳಿಕ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು, ಈತನಕ ಕ್ಷೀಣಗೊಂಡAತಿದ್ದ ಮುಂಗಾರು ಇದೀಗ ತನ್ನ ಪ್ರತಾಪ ತೋರಲಾರಂಭಿಸಿದೆ.
ಬಹುತೇಕ ಇಡೀ ಜಿಲ್ಲೆ ಇದೀಗ ವಾಯು-ವರುಣನ ರಭಸಕ್ಕೆ ನಲುಗುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಎಲ್ಲೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿ-ತೊರೆಗಳು ಮತ್ತೆ ತುಂಬಿ ಹರಿಯಲಾರಂಭಿಸಿದೆ.
ಭಾಗಮಂಡಲ ಸೇರಿದಂತೆ ಕಾವೇರಿ ನದಿ ಹರಿಯುವ ಮಾರ್ಗ ದುದ್ದಕ್ಕೂ ನೀರಿನ ಮಟ್ಟ ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನಿನ್ನೆ ಸಂಜೆಯೇ ಹಾರಂಗಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, ಒಳಹರಿವು ಇನ್ನಷ್ಟು ಹೆಚ್ಚಾಗುತ್ತಿದೆ. ಜಿಲ್ಲೆಯ ಅಲ್ಲಲ್ಲಿ ಮರ-ವಿದ್ಯುತ್ ಕಂಬಗಳು ಮುರಿದು ಬೀಳುತ್ತಿರುವುದರೊಂದಿಗೆ ವಿದ್ಯುತ್ ಸಮಸ್ಯೆ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ.
ಇದರೊಂದಿಗೆ ಇತರ ರೀತಿಯ ಅನಾಹುತಗಳೂ ವರದಿಯಾಗುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೪ ಇಂಚುಗಳಿಗೂ ಅಧಿಕ ಮಳೆ ಸುರಿದಿದೆ. ವ್ಯಾಪಕ ಮಳೆಯಿಂದಾಗಿ ನದಿ-ತೊರೆಗಳು ತುಂಬಿ ಹರಿಯಲಾರಂಭಿಸಿದ್ದು, ತಗ್ಗು ಪ್ರದೇಶದ ನಿವಾಸಿಗಳು ಎಚ್ಚರ ದಿಂದಿರುವುದು ಅಗತ್ಯವಾಗಿದೆ. ಜಿಲ್ಲಾಡಳಿತವೂ ಪರಿಸ್ಥಿತಿ ನಿಭಾಯಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಬಿರುಸಿನ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತ್ರಿವೇಣಿ ಸಂಗಮದಲ್ಲಿ ನೀರು ಭರ್ತಿಯಾಗಿದ್ದು, ಭಾಗಮಂಡಲದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಭಾಗಮಂಡಲ-ನಾಪೋಕ್ಕು ಸಂಪರ್ಕ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ . ಭಾಗಮಂಡಲ-ಮಡಿಕೇರಿ ರಸ್ತೆಯಲ್ಲಿ ಒಂದು ಅಡಿಗಳಷ್ಟು ನೀರು ಹರಿ ಯುತ್ತಿದೆ. ಬಿರುಸಿನ ಮಳೆಯಿಂದಾಗಿ ಬೆಟ್ಟ ಶ್ರೇಣಿಗಳಿಂದ ಹರಿ ಬರುತ್ತಿರುವ ನೀರು ತ್ರಿವೇಣಿ ಸಂಗಮದಲ್ಲಿ ಸಂಗ್ರಹಗೊAಡು ಜಲಾವೃತವಾಗಿದೆ.
ಗುಡ್ಡೆಹೊಸೂರು ಸಮೀಪದ ರಂಗಸಮುದ್ರ ಗ್ರಾಮಕ್ಕೆ ಸೇರಿದ ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಕಾವೇರಿ ನದಿಗೆ ಸೇರುತ್ತಿದೆ.
ರೈತರ ಭತ್ತ ಬೆಳೆಗೆ ಚಿಕ್ಲಿಹೊಳೆ ನಾಲೆಯಿಂದ ನೀರನ್ನು ಕಾಲುವೆಗಳಿಗೆ ಬಿಡುವಂತೆ ಈ ವಿಭಾಗದ ರೈತರು ಒತ್ತಾಯಿಸಿದ್ದಾರೆ. ಹೆಚ್ಚುವರಿ ನೀರು ನದಿಗೆ ಸೇರುವ ಬದಲು ಭತ್ತ ಬೇಸಾಯಕ್ಕೆ ಒದಗಿಸಲು ಇಲಾಖಾಧಿಕಾರಿಗಳು ಮುಂದಾಗಲಿ ಎಂಬುದು ರೈತರ ಬೇಡಿಕೆಯಾಗಿದೆ.
೪.೨೭ ಇಂಚು ಸರಾಸರಿ ಮಳೆ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಂಬತೆ ಸರಾಸರಿ ೪.೨೭ ಇಂಚಿನಷ್ಟು ಧಾರಾಕಾರ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೬.೨೭ ಇಂಚು, ವೀರಾಜಪೇಟೆ ತಾಲೂಕಿನಲ್ಲಿ ೩.೧೪ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೩.೪೦ ಇಂಚು ಸರಾಸರಿ ಮಳೆಯಾಗಿದೆ.
ಭಾಗಮಂಡಲ ೯.೫೨,
ಶಾಂತಳ್ಳಿಗೆ ೮ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಭಾಗಮಂಡಲ ಹೋಬಳಿ, ಶಾಂತಳ್ಳಿ ಹೋಬಳಿ, ಹುದಿಕೇರಿ, ನಾಪೋಕ್ಲು, ಸಂಪಾಜೆ ಹೋಬಳಿಗಳಲ್ಲಿ ಭಾರೀ ಮಳೆ ಸುರಿದಿದೆ. ಭಾಗಮಂಡಲ ವಿಭಾಗದಲ್ಲಿ ೯.೫೨ ಇಂಚು, ಶಾಂತಳ್ಳಿ ೮ ಇಂಚು, ಸಂಪಾಜೆ ೬.೯೪ ಇಂಚು, ನಾಪೋಕ್ಲು ೫.೧೫, ಹುದಿಕೇರಿಯಲ್ಲಿ ೪.೫೨ ಇಂಚುಗಳಷ್ಟು ಭಾರೀ ಮಳೆಯಾಗಿದೆ. ಈ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿರುವುದಾಗಿ ವರದಿಯಾಗಿದೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕವೂ ಇದೀಗ ಉದ್ಭವಿಸಿದೆ.
ಮಡಿಕೇರಿ ನಗರದಲ್ಲೂ ೨೪ ಗಂಟೆಗಳಲ್ಲಿ ಸುಮಾರು ೪.೫೦ ಇಂಚು ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಹೋಬಳಿಗಳಾದ ಮಡಿಕೇರಿ ಕಸಬಾ ೩.೪೭, ವೀರಾಜಪೇಟೆ ಕಸಬಾ ೪.೨೮, ಶ್ರೀಮಂಗಲ ೨.೮೪, ಪೊನ್ನಂಪೇಟೆ ೨.೫೨, ಅಮ್ಮತ್ತಿ ೨.೩೪, ಬಾಳೆಲೆಯಲ್ಲಿ ೧.೮೯ ಇಂಚುಗಳಷ್ಟು ಮಳೆ ಬಿದ್ದಿದೆ.
ಸೋಮವಾರಪೇಟೆ ಕಸಬಾ ೩.೬೯, ಶನಿವಾರಸಂತೆ ೨.೨೦, ಕೊಡ್ಲಿಪೇಟೆ ೧.೮೨, ಕುಶಾಲನಗರ ೧.೩೩ ಹಾಗೂ ಸುಂಟಿಕೊಪ್ಪ ಹೋಬಳಿಯಲ್ಲಿ ೩.೪೦ ಇಂಚುಗಳಷ್ಟು ಮಳೆಯಾಗಿದೆ.