ಮಡಿಕೇರಿ, ಜು. ೨೨: ಕೊಡಗು ಜಿಲ್ಲೆಯಲ್ಲಿ ಇದೀಗ ನೈಜ ಮಳೆಗಾಲದ ಅನುಭವದೊಂದಿಗೆ ಮುಂಗಾರು ಬಿರುಸು ಪಡೆದುಕೊಂಡಿದೆ. ಕಳೆದ ಎರಡು ದಿನಗಳಿಂದ ಪುಷ್ಯ ಮಳೆ ಬಿರುಸು ತೋರುತ್ತಿದ್ದು, ಮಳೆಯೊಂದಿಗೆ ಗಾಳಿಯೂ ಹೆಚ್ಚಾಗಿದೆ. ಹಲವೆಡೆಗಳಲ್ಲಿ ಮರ, ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಇಲ್ಲಿಯವರೆಗೆ ಮುಂಗಾರು ದುರ್ಬಲವಾಗಿದ್ದರೂ, ಆಗೊಮ್ಮೆ ಈಗೊಮ್ಮೆ ಹಠಾತ್ತನೆ ಸುರಿಯುತ್ತಿದ್ದ ಗಾಳಿ ಮಳೆಯಿಂದ ಪ್ರಮುಖವಾಗಿ ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗುತ್ತಿದ್ದು, ವರ್ಷದ ಆರಂಭದಿAದ ಇಲ್ಲಿಯವರೆಗೆ ಒಟ್ಟು ೧,೧೧೧ ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿರುವ ವರದಿಯಾಗಿದೆ.
ಗ್ರಾಮೀಣ ಭಾಗಗಳಲ್ಲಿ ಮಳೆಯಿಂದ ಮರಗಳು ಧರೆಗುರುಳುವ ಮೂಲಕ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದೆ. ಈ ಎಲ್ಲಾ ಹಂತಗಳಲ್ಲಿ ಚೆಸ್ಕಾಂ ಇಲಾಖಾ ಸಿಬ್ಬಂದಿಗಳು ಕ್ರಮ ಕೈಗೊಂಡು ವಿದ್ಯುತ್ ಮರು ಸಂಪರ್ಕವನ್ನು ಕಲ್ಪಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಳೆ ಗಾಳಿಯೆನ್ನದೆ ಪವರ್ಮ್ಯಾನ್ಗಳು ನಗರ, ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುತ್ ಅಡಚಣೆ ನೀಗಿಸಲು ಹರಸಾಹಸ ಪಡುತ್ತಿದ್ದಾರೆ. ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಗಾಳಿಯ ರಭಸಕ್ಕೆ ಮರ ಬಿದ್ದು ಕಂಬಗಳು ಮುರಿದು ಹಾನಿಯಾಗಿರುವ ಕಡೆ ವಾಹನವೂ ಸಂಚರಿಸದ ಹಾದಿಯಲ್ಲಿ ಇಲಾಖೆಯ ಸಿಬ್ಬಂದಿಗಳೇ ಕಂಬವನ್ನು ಹೊತ್ತು ಸಾಗಿಸಿ ಮಳೆಗಾಲದ ಸೈನಿಕರಂತೆ ವಿದ್ಯುತ್ ಸಮಸ್ಯೆ ಪರಿಹರಿಸುವಲ್ಲಿ ಶ್ರಮಿಸುತ್ತಿದ್ದಾರೆ. ಸಿಬ್ಬಂದಿಗಳ ಕೊರತೆ ನಡುವೆ ಕೆಲಸ ನಿರ್ವಹಿಸುವ ಪಡಿಪಾಟಲು ಹೇಳತೀರದಾಗಿದೆ.
ಜಿಲ್ಲೆಯ ನಾಪೋಕ್ಲು, ಶ್ರೀಮಂಗಲ ಭಾಗದಲ್ಲಿ ಅತಿ ಹೆಚ್ಚು ಮಳೆಯೊಂದಿಗೆ ಮರ ಬಿದ್ದು ಕಂಬಗಳು ಹಾನಿಗೊಳಗಾಗಿ ವಿದ್ಯುತ್ ಸಮಸ್ಯೆ ಬಿಗಡಾಯಿಸಿದೆ.
ಕೆದಮುಳ್ಳೂರು, ಪಾಲಂಗಾಲ, ಹೆಗ್ಗಳ, ತೋರ, ಕುಟ್ಟಂದಿ, ಶೆಟ್ಟಿಗೇರಿ, ಅಮ್ಮತ್ತಿ, ಶ್ರೀಮಂಗಲ, ಬಿರುನಾಣಿ, ಟಿ.ಶೆಟ್ಟಿಗೇರಿ
ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಒಳಹರಿವು ಹೆಚ್ಚಾಗಿದ್ದು ಹಾರಂಗಿ ನೀರಾವರಿ ಇಲಾಖೆ ಹಾರಂಗಿ ಮತ್ತು ಕಾವೇರಿ ನದಿ ದಂಡೆಯ ನಿವಾಸಿಗಳಿಗೆ ಜನ ಮತ್ತು ಜಾನುವಾರುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡುವುದ ರೊಂದಿಗೆ ಸಂಜೆ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಹರಿಸಲಾಯಿತು.
ಮಳೆ ಹೆಚ್ಚಾದ ಕಾರಣ ೨೦ ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರು ಒಳ ಹರಿವು ಬಂದ ಹಿನ್ನೆಲೆಯಲ್ಲಿ ನದಿಗೆ ೫ ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಯಿತು. ಶಾಸಕ ಡಾ. ಮಂಥರ್ ಗೌಡ ವಿಶೇಷ ಪೂಜೆ ಸಲ್ಲಿಸಿ ನೀರು ಬಿಡುಗಡೆಗೆ ಚಾಲನೆ ನೀಡಿದರು. ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮತ್ತಿತರರು ಹಾಜರಿದ್ದರು. ಹಂತಹAತವಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-ಕೆಕೆಎನ್/ಸಿಂಚು