ಗೋಣಿಕೊಪ್ಪಲು, ಜು. ೨೨: ಅರಣ್ಯದಂಚಿನಲ್ಲಿರುವ ಚೆನ್ನಯ್ಯನ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಅಡವಿ ಅಲರ್ಟ್ ಫೌಂಡೇಷನ್ನ ಪದಾಧಿಕಾರಿಗಳು ಡೆಸ್ಕ್, ಬೆಂಚ್, ಕಂಪ್ಯೂಟರ್ ಹಾಗೂ ಮಕ್ಕಳ ಕಲಿಕಾ ಸಾಮಗ್ರಿಗಳನ್ನು ಸಂಸ್ಥೆಯ ಅಧ್ಯಕ್ಷ ಪವನ್ ಜೋಶಿ ಹಾಗೂ ತಂಡ ವಿತರಿಸಿತು.
ಅರಣ್ಯದ ಅಂಚಿನಲ್ಲಿರುವ ಶಾಲೆಗಳಲ್ಲಿ ಬಹುತೇಕ ಕಾರ್ಮಿಕ ವರ್ಗದ ಮಕ್ಕಳು ಶಿಕ್ಷಣ ಪಡೆಯು ತ್ತಿದ್ದಾರೆ. ಇವರಲ್ಲಿ ವಿಶೇಷವಾದ ಪರಿಸರ ಕಾಳಜಿಯನ್ನು ನೋಡಬಹು ದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಕಂಪ್ಯೂಟರ್ ಹಾಗೂ ಪೀಠೋಪಕರಣಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಗಿದೆ. ಸಂಸ್ಥೆಯು ಕಳೆದ ೨೦ ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಈ ಬಾರಿ ಚೆನ್ನಂಗಿ ಶಾಲೆಯ ವಿದ್ಯಾರ್ಥಿಗಳಿಗೆ ಈ ಸವಲತ್ತುಗಳನ್ನು ವಿತರಿಸಲಾಗಿದೆ. ಮುಂದಿನ ದಿನದಲ್ಲಿ ಪರಿಸರದ ಬಗ್ಗೆ ಮಕ್ಕಳಲ್ಲಿ ಇನ್ನಷ್ಟು ಜ್ಞಾನ ತುಂಬುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತವೆ ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೈ.ಕೆ. ಬೇಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮೇಕೇರಿರ ಅರುಣ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಲಭ್ಯವಿರುವ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳು ಪ್ರಗತಿ ಸಾಧಿಸುತ್ತಿದ್ದಾರೆ. ಪಂಚಾಯಿತಿ ವತಿಯಿಂದ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಒದಗಿಸಲಾಗಿದೆ. ಮುಂದೆಯೂ ಆದ್ಯತೆ ಮೇರೆ ಅನುದಾನವನ್ನು ನೀಡಲಾಗುತ್ತಿದೆ ಎಂದರು.
ವೀರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಗಣನೆಗೆ ತೆಗೆದು ಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡಿದೆ. ತಾಲೂಕಿನಲ್ಲಿ ಇನ್ನಷ್ಟು ಸೇವೆಯನ್ನು ನೀಡಲು ಸಂಸ್ಥೆಗಳು ಮುಂದೆ ಬರಬೇಕು. ಶಾಲೆಯ ಅಡಳಿತ ಮಂಡಳಿ ವತಿಯಿಂದ ಮುಖ್ಯಶಿಕ್ಷಕ ಬಿ.ಎಸ್. ರಂಗಸ್ವಾಮಿ, ಬಿಇಓ ಪ್ರಕಾಶ್, ಕ್ಷೇತ್ರ ಸಮನ್ವಯ ಅಧಿಕಾರಿ ವನಜಾಕ್ಷಿ, ಅಡವಿ ಸಂಸ್ಥೆಯ ಮುಖ್ಯಸ್ಥ ಪವನ್ ಜೋಶಿ ಹಾಗೂ ಇತರ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಗಿರಿಜನ ಮುಖಂಡ ಪಿ.ಕೆ. ಸಿದ್ದಪ್ಪ, ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಲಯನ್ಸ್ ಸಂಸ್ಥೆಯ ಸದಸ್ಯ ಎಂ.ಎಸ್. ಪವಿ, ಕಾಫಿ ಬೆಳೆಗಾರ ವಾಟೇರಿರ ಸುರೇಶ್, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಮೀರ್, ಎಸ್ಡಿಎಂಸಿ ಸದಸ್ಯರು ಸ್ಥಳೀಯ ಗ್ರಾಮಸ್ಥರು ಸೇರಿದಂತೆ ಪ್ರಮುಖರು ಹಾಜರಿದ್ದರು. ಮುಖ್ಯ ಶಿಕ್ಷಕ ಬಿ.ಎಸ್. ರಂಗಸ್ವಾಮಿ ಸ್ವಾಗತಿಸಿ, ಶಿಕ್ಷಕಿ ನಸೀಮ ಹಾಗೂ ಸುಷಾ ನಿರೂಪಿಸಿ, ವಂದಿಸಿದರು. ಶಾಲಾ ವಿದ್ಯಾರ್ಥಿ ಸಂಜನ ಮತ್ತು ತಂಡದಿAದ ಸ್ವಾಗತ ನೃತ್ಯ ಗಮನ ಸೆಳೆಯಿತು.