ಸುಂಟಿಕೊಪ್ಪ, ಜು. ೨೨: ಇಂದಿನ ದಿನಗಳಲ್ಲಿ ನಾವು ಎಷ್ಟೇ ಸಿರಿವಂತಿಕೆಯನ್ನು ಹೊಂದಿದ್ದರೂ ಶಿಕ್ಷಣ ಇಲ್ಲದಿದ್ದರೆ ನಮ್ಮನ್ನು ಬಡವನೆಂದು ಸಮಾಜ ಪರಿಗಣಿಸುತ್ತದೆ ಎಂದು ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಹೇಳಿದರು.

ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ವ್ಯಾಸಂಗದ ಅವಧಿಯಲ್ಲಿ ಒಂದು ನಿರ್ದಿಷ್ಟ ಧ್ಯೇಯವನ್ನು ಇಟ್ಟುಕೊಂಡು ಆ ಧ್ಯೇಯದ ಸಾಕಾರಕ್ಕೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕೆಂದು ಕಿವಿಮಾತು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುಂಟಿಕೊಪ್ಪ ಪೊಲೀಸ್ ಠಾಣೆಯ ಎ.ಎಸ್.ಐ. ಶಿವಣ್ಣ ಮಾತನಾಡಿ, ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಮಾದಕ ವ್ಯಸನಗಳಿಗೆ ದಾಸರಾದರೆ ವಿದ್ಯಾರ್ಥಿ ಜೀವನವು ನರಕ ಸದೃಶ್ಯವಾಗುತ್ತದೆ ಎಂದರು.

ಸಮಾರAಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಕಂಡುಕೊಳ್ಳಲು ಕಾಲೇಜಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯನ್ನು ಸೃಷ್ಟಿಸಿಕೊಡುತ್ತವೆ ಎಂದರು. ಈ ಸಂದರ್ಭ ಎ. ಲೋಕೇಶ್ ಕುಮಾರ್ ಮತ್ತು ಶಿವಣ್ಣ ಅವರುಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಉಪನ್ಯಾಸಕ ಈಶ ಅವರು ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಕೆ.ಸಿ. ಕವಿತಾ, ಸುನಿತಾ, ಸರಳಾ, ಪದ್ಮಾವತಿ, ಕವಿತಾ ಭಕ್ತಾ, ಮಂಜುಳ, ಸುಚಿತ್ರಾ, ಅಭಿಪೇಕ, ಅನುಷ, ಕನಕಾ ಇದ್ದರು.

ಕಾಲೇಜು ನಾಯಕ ಹಸೈನ್ ಸ್ವಾಗತಿಸಿ, ವಿಜು ಪ್ರಾಸ್ತಾವಿಕ ನುಡಿಯಾಡಿದರೆ, ಶ್ವೇತ ನಿರೂಪಿಸಿ, ತಸ್ಮಿಯ ವಂದಿಸಿದರು.