ಕಡಂಗ, ಜು. ೨೨: ಸಮೀಪದ ಕುಂಜಿಲಗೇರಿ ಗ್ರಾಮದಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದರೂ ಶೀತಮಯ ವಾತಾವರಣದಿಂದ ಕಾಫಿ ಬೆಳೆಗೆ ಕೊಳೆರೋಗ ಬಂದಿದ್ದು, ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.

ಈ ಬಗ್ಗೆ ಸರ್ಕಾರ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಫಿ ಹೂವು ಅವಧಿಗಿಂತ ಮುನ್ನವೇ ಅರಳಿರುವುದರಿಂದ ಜೂನ್ ತಿಂಗಳ ಆರಂಭದ ವೇಳೆಗೆ ಕಾಯಿಗಳು ದಪ್ಪವಾಗಿದ್ದು, ಹಾಗೆಯೇ ಬಿಸಿಲು ಮಳೆಯ ಮಿಶ್ರ ವಾತಾವರಣ ನಷ್ಟದ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದು ಕುಂಜಿಲಗೇರಿ ಬೆಳೆಗಾರ ಪೊನ್ನಣ್ಣ ಕೆ.ಎಸ್. ತಿಳಿಸಿದ್ದಾರೆ.

ಕೊಳೆ ರೋಗಕ್ಕೆ ಔಷಧಿ ಸಿಂಪಡಣೆ ವಿಚಾರದಲ್ಲಿ ಮಾಹಿತಿ ಕೊರತೆ ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚದೊಂದಿಗೆ ಮುಂದಿನ ದಿನಗಳಲ್ಲಿ ರಾಸಾಯನಿಕದಿಂದ ಕಾಫಿ ಗಿಡಗಳು ನಾಶವಾಗುವ ಸಾಧ್ಯತೆಯಿದ್ದು, ಪರ್ಯಾಯ ಮಾರ್ಗ ಕಂಡು ಕೊಳ್ಳಬೇಕಿದೆ ಎಂದು ಗ್ರಾಮದ ರೈತ ಗಿರೀಶ್ ರೈ ಹೇಳಿದ್ದಾರೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಪ್ರಮಾಣದ ಮಳೆಯಾದರೂ ಹೆಚ್ಚಿನ ನಷ್ಟವಾಗಿದೆ ಎಂದು ಕುಂಜಿಲಗೇರಿ ಗ್ರಾಮದ ಕಾಫಿ ಬೆಳೆಗಾರ ಪ್ರವೀಣ್ ತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.

-ನೌಫಲ್.