ಚೆಯ್ಯಂಡಾಣೆ, ಜು. ೨೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ, ಕೋಕೇರಿ, ಚೇಲಾವರದಲ್ಲಿ ಕಾಡಾನೆಗಳು ಗೊಬ್ಬರ ಚೀಲ, ಗದ್ದೆ, ಕಾಫಿ, ಅಡಿಕೆ, ತೆಂಗು, ಬಾಳೆ ಒಳ್ಳೆಮೆಣಸು ಗಿಡಗಳನ್ನು ತುಳಿದು ನಾಶಪಡಿಸಿವೆ.

ನರಿಯಂದಡ ಗ್ರಾಮದ ಪೊಕ್ಕುಳಂಡ್ರ ನಾಣಯ್ಯ ಅವರ ಗೊಬ್ಬರದ ಚೀಲವನ್ನು ತುಳಿದು ನಾಶಪಡಿಸಿದ್ದು, ನಂತರ ಗದ್ದೆಗೂ ಹಾನಿಪಡಿಸಿದೆ.

ಚೇಲಾವರದ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ. ಈರಪ್ಪ, ನರಿಯಂದಡ ಹಾಗೂ ಕೋಕೇರಿ ಗ್ರಾಮದ ಸುಮಂತ್, ಶಿವರಾಂ, ಬಿ. ಅಶೋಕ್, ಎನ್. ಪ್ರವೀಣ್ ಕಾಳಪ್ಪ ಹಾಗೂ ಮತ್ತಿತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಬಾಳೆ, ತೆಂಗು, ಅಡಿಕೆ, ಒಳ್ಳೆಮೆಣಸು ಗಿಡಗಳನ್ನು ನಾಶಗೊಳಿಸಿದೆ.

ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹಾನಿಗೊಳಗಾದ ಸ್ಥಳಕ್ಕೆ ವೀರಾಜಪೇಟೆ ವಲಯ ಅರಣ್ಯ ಡಿಆರ್‌ಎಫ್‌ಓ ಅನಿಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.