ಮುಳ್ಳೂರು, ಜು. ೨೨: ಎದುರಿಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಸೇತುವೆ ಕಟ್ಟೆಮೇಲೆ ಹತ್ತಿದ ಘಟನೆ ಶುಕ್ರವಾರ ರಾತ್ರಿ ಸಮೀಪದ ಗುಡುಗಳಲೆ ಸೇತುವೆ ಬಳಿ ನಡೆದಿದೆ. ಹಂಡ್ಲಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ತಾಳೂರು ಗ್ರಾಮದ ನವೀನ್ ಎಂಬಾತ ತನಗೆ ಸೇರಿದ ಇನ್ನೋವಾ ಕಾರಿನಲ್ಲಿ ಶನಿವಾರಸಂತೆ ಕೆಆರ್ಸಿ ವೃತ್ತದಿಂದ ಗುಡುಗಳಲೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಆಸ್ಪತ್ರೆ ಬಳಿ ಕಾರು ಶನಿವಾರಸಂತೆ ಕಡೆಗೆ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ. ನಂತರವೂ ನಿಯಂತ್ರಣಕ್ಕೆ ಸಿಗದ ಕಾರು ಗುಡುಗಳಲೆ ಬಳಿಯಲ್ಲಿರುವ ಸೇತುವೆ ಕಟ್ಟೆಮೇಲೆ ಅಪ್ಪಳಿಸಿದೆ. ಅದೃಷ್ಟವಶಾತ್ ನದಿಯೊಳಕ್ಕೆ ಕಾರು ಬೀಳುವುದು ಸ್ವಲ್ಪದರಲ್ಲೆ ತಪ್ಪಿದೆ. ಕಾರಿನ ಮುಂಭಾಗದ ಚಕ್ರಗಳು ನದಿಗೆ ಚಾಚಿಕೊಂಡAತೆ ಸೇತುವೆ ಕಂಬಿ ಮೇಲೆ ಸಿಕ್ಕಿಕೊಂಡಿತ್ತು. ಘಟನೆ ನಂತರ ಕಾರು ಚಾಲಕ ನವೀನ್ ಹಾಗೂ ಈತನ ಜೊತೆಗಿದ್ದ ಮತ್ತೊಬ್ಬ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಘಟನೆ ಸಂದರ್ಭ ಬೈಕ್ ಸವಾರರಾದ ಹಾಸನ ಜಿಲ್ಲೆಗೆ ಸೇರಿದ ಕೌಕೋಡಿ ಗ್ರಾಮದ ವಿನೋದ್ ಮತ್ತು ಸತೀಶ್ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ. ಘಟನೆ ಕುರಿತು ಬೈಕ್ ಸವಾರರು ಶನಿವಾರಸಂತೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.