ಸುಂಟಿಕೊಪ್ಪ, ಜು. ೨೧: ಪಟ್ಟಣದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಯೋಜನೆ ಹಣ ಬಿಡುಗಡೆಯಾಗದೆ ನೆನೆಗುದಿಗೆ ಬಿದ್ದಿದೆ.

ನೂತನ ಮಾರುಕಟ್ಟೆಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪ ಶಾಂತಗೇರಿ ತೋಟದ ಮಾಲೀಕರು ಭೂ ಪರಿವರ್ತನೆ ಸಂದರ್ಭ ೨ ಎಕರೆ ಜಾಗವನ್ನು ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ನೀಡಿದ್ದರು. ಸುಂಟಿಕೊಪ್ಪ ನಗರದ ಮಧ್ಯೆ ಇರುವ ಮಾರುಕಟ್ಟೆಯನ್ನು ತೆರವುಗೊಳಿಸಿ ಪಂಚಾಯಿತಿಗೆ ನೀಡಿರುವ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ಅಂಗಡಿ ಮಳಿಗೆ, ಪ್ಲಾಟ್‌ಫರ‍್ಮ್, ವಾಹನ ನಿಲುಗಡೆಗೆ ೨೦೨೧ರಲ್ಲಿ ೪ ಕೋಟಿ ಹಣ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರ ನಿರೀಕ್ಷೆಯೊಂದಿಗೆ ಆಗಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಅವರ ಅನುದಾನದಲ್ಲಿ ೧೭ ಲಕ್ಷ ವೆಚ್ಚದಲ್ಲಿ ಮಾರುಕಟ್ಟೆಯ ಮೊದಲ ಹಂತದ ಕಾಮಗಾರಿ ನಡೆದರೂ ಹೆಚ್ಚಿನ ಹಣ ಮಂಜೂರಾಗದೆ ನಂತರದ ದಿನಗಳಲ್ಲಿ ಕಾಮಗಾರಿ ಸ್ಥಗಿತಗೊಂಡು ನಿರ್ಮಾಣವಾದ ಕಟ್ಟಡ ಕಾಡು ಪಾಲಾಗಿದೆ. ಇದರಿಂದ ಮಳೆಗಾಲದಲ್ಲಿ ವ್ಯಾಪಾರಸ್ಥರು ಗ್ರಾಹಕರು ಸಂಕಷ್ಟ ಅನುಭವಿಸುವಂತಾಗಿದೆ.

ಭಾನುವಾರ ನಡೆಯುವ ಸುಂಟಿಕೊಪ್ಪ ಸಂತೆಗೆ ಸುಂಟಿಕೊಪ್ಪ ವ್ಯಾಪ್ತಿಯ ನಾಕೂರು ಶಿರಂಗಾಲ, ಕಂಬಿಬಾಣೆ, ಹಟ್ಟಿಹೊಳೆ, ಸೂರ್ಲಬ್ಬಿ ೭ನೇ ಹೊಸಕೋಟೆ ಮುಂತಾದ ಕಡೆಗಳಿಂದ ರೈತರು ತಾವು ಬೆಳೆದ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಅಲ್ಲದೆ ಹೊರ ಜಿಲ್ಲೆಗಳಾದ ಕಂಪ್ಲಾಪುರ, ಪಿರಿಯಾಪಟ್ಟಣ, ಕುಶಾಲನಗರ, ಆವರ್ತಿ, ಕೂಡಿಗೆ, ಹೆಬ್ಬಾಲೆ ಕಡೆಗಳಿಂದ ತರಕಾರಿ ಅಕ್ಕಿ ದಿನಸಿ ಸಾಮಗ್ರಿಗಳ ವ್ಯಾಪಾರಸ್ಥರು ಇಲ್ಲಿ ಬಂದು ವ್ಯಾಪಾರ ಮಾಡುತ್ತಾರೆ. ಆದರೆ ಸುಂಟಿಕೊಪ್ಪ ಸಂತೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಳಿಲ್ಲ. ಮೇಲ್ಛಾವಣಿ ಇಲ್ಲದೆ ಮಳೆಗಾಲದಲ್ಲಿ ಬೇಸಿಗೆ ಕಾಲದಲ್ಲಿ ಪ್ಲಾಸ್ಟಿಕ್‌ನಿಂದ ರಕ್ಷಣೆ ಪಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಲಿ ಎಂಬದು ಸಾರ್ವಜನಿಕರು, ವ್ಯಾಪಾರಸ್ಥರ ಆಗ್ರಹವಾಗಿದೆ. - ರಾಜುರೈ