ಮಡಿಕೇರಿ, ಜು. ೨೧: ರಾಡ್‌ನಿಂದ ಮಾರಣಾಂತಿಕವಾಗಿ ಅಪ್ಪ-ಅಮ್ಮನ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದ ಮಗನನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಮದೆನಾಡಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ಬೆಂಗಳೂರಿನ ಬ್ಯಾಟರಾಯನಪುರದ ಶರತ್ (೨೭) ಬಂಧಿತ ಆರೋಪಿ. ತಾ. ೨೦ ರಂದು ರಾತ್ರಿ ಮದೆನಾಡಿನಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಶರತ್ ಕುರಿತು ಅಲ್ಲಿನ ಸ್ಥಳೀಯರು ೧೧೨ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಈತನ ಮೇಲೆ ಅನುಮಾನ ಮೂಡಿದೆ. ಪೊಲೀಸರು ಪ್ರಶ್ನಿಸಿದ ಸಂದರ್ಭ ಸರಿಯಾಗಿ ಉತ್ತರಿಸುತ್ತಿರಲಿಲ್ಲ. ಮಾನಸಿಕವಾಗಿ ಸಮಸ್ಯೆ ಇದೆ ಎಂಬ ರೀತಿ ಕಾಣುತ್ತಿದ್ದ ಹಿನ್ನೆಲೆ ಪೊಲೀಸರು ಸೂಕ್ತ ಭದ್ರತೆಯೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಈತನ ಕುರಿತು ಪೊಲೀಸ್ ಉಪನಿರೀಕ್ಷಕ ಉಮೇಶ್ ಉಪ್ಪಳಿಕೆ ಮಾಹಿತಿ ಕಲೆ ಹಾಕಿದ ಸಂದರ್ಭ ಶರತ್ ತಂದೆ-ತಾಯಿಯನ್ನೇ ಕೊಂದ ಕೊಲೆಗಾರ ಎಂಬ ಮಾಹಿತಿ ಲಭ್ಯವಾಗಿದೆ.
ತಕ್ಷಣ ಗ್ರಾಮಾಂತರ ಪೊಲೀಸರು ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಈತ ಪುತ್ತೂರಿಗೆ ತೆರಳಿ ವಾಪಸ್ ಮಡಿಕೇರಿ ಕಡೆಗೆ ಬರುತ್ತಿದ್ದ ಎನ್ನಲಾಗಿದೆ.
ಇದೀಗ ಆರೋಪಿಯನ್ನು ಮಡಿಕೇರಿಗೆ ಆಗಮಿಸಿ ಕೊಡಿಗೇಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆದೊಯ್ದು ಮುಂದಿನ ಕ್ರಮಕೈಗೊಂಡಿದ್ದಾರೆ.
ಏನಿದು ಘಟನೆ.?
ತನ್ನ ಹೆತ್ತ ತಂದೆ, ತಾಯಿಯನ್ನು ರಾಡ್‌ನಿಂದ ಹೊಡೆದು ಹತ್ಯೆಗೈದ ಘಟನೆ ಸೋಮವಾರ ಸಂಜೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿತ್ತು. ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರ್ (೬೪) ಮತ್ತು ಕೇಂದ್ರ ಸರ್ಕಾರಿ ನಿವೃತ್ತ ಉದ್ಯೋಗಿ ಶಾಂತಾ (೬೦) ಅವರನ್ನು ಅವರ ಮಗ ಶರತ್ ಕೊಲೆಗೈದಿದ್ದ.
(ಮೊದಲ ಪುಟದಿಂದ) ಶರತ್ ಕುಡಿದ ಹಾಗೂ ಮಾದಕ ವ್ಯಸನ ಸೇವನೆಯ ಅಮಲಿನಲ್ಲಿ ಕಬ್ಬಿಣದ ರಾಡ್‌ನಿಂದ ತಂದೆ, ತಾಯಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಭಾಸ್ಕರ್ ಹಾಗೂ ಅವರ ಪತ್ನಿ ಶಾಂತಾ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು.
ಶರತ್ ಮಾನಸಿಕ ಸಮಸ್ಯೆ ಇದ್ದವನಾಗಿದ್ದು, ಯಾವುದೇ ಕೆಲಸಕ್ಕೆ ತೆರಳುತ್ತಿರಲಿಲ್ಲ. ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಮೃತ ದಂಪತಿ ಮಂಗಳೂರು ಮೂಲದವರಾಗಿದ್ದು, ೨೦ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳ ಪೈಕಿ ಹಿರಿಯ ಮಗ ಶಶಾಂಕ್ ಮದುವೆಯಾಗಿ ಬೇರೆ ಕಡೆ ನೆಲೆಸಿದ್ದರು. ಮೃತ ಪೋಷಕರು ಶರತ್‌ನೊಂದಿಗೆ ವಾಸಿಸುತ್ತಿದ್ದರು.
ಸೋಮವಾರ ಸಂಜೆ ಕೊಲೆಗೈದು ಮನೆ ಲಾಕ್ ಮಾಡಿ ಆರೋಪಿ ಪರಾರಿಯಾಗಿದ್ದ. ಹಿರಿಯ ಮಗ ತಂದೆ-ತಾಯಿಗೆ ಅಂದು ಕರೆ ಮಾಡಿದ್ದಾನೆ. ಯಾರೂ ಫೋನ್ ಸ್ವೀಕರಿಸದಿದ್ದಾಗ ಆತಂಕಗೊAಡು ಪಕ್ಕದ ಮನೆಯವರಿಗೆ ಕರೆ ಮಾಡಿ ಪೋಷಕರ ಬಗ್ಗೆ ವಿಚಾರಿಸಿದ್ದಾನೆ. ಅವರು ಬಂದು ನೋಡಿದಾಗ ಜೋಡಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬAಧ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆಬೀಸಿದ್ದರು. - ಹೆಚ್.ಜೆ. ರಾಕೇಶ್