ಸುಂಟಿಕೊಪ್ಪ, ಜು. ೨೧ : ಅತಿಯಾದ ಗಾಳಿ ಮಳೆಗೆ ಮನೆ ಮೇಲೆ ಭಾರೀ ಗಾತ್ರದ ಬೀಟಿ ಮರ ಬಿದ್ದಿದ್ದು ಅದೃಷ್ಟವಶಾತ್ ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ೭ನೇ ಮೈಲು ಗ್ರಾಮದ ವಿಕ್ರಮ್ ಬಡಾವಣೆಯ ವಸಂತಿ ಎಂಬವರ ಮನೆ ಮೇಲೆ ರಾತ್ರಿ ಬೀಸಿದ ಗಾಳಿ ಮಳೆಗೆ ಭಾರೀ ಗಾತ್ರದ ಬೀಟಿ ಮರ ಬಿದ್ದ ಪರಿಣಾಮ ಅಡುಗೆ ಕೋಣೆ, ಶೌಚಾಲಯ ಸಂಪೂರ್ಣ ನೆಲಸಮವಾಗಿ ಸುಮಾರು ರೂ. ೫೦ ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮನೆಯಲ್ಲಿ ವಸಂತಿ ಹಾಗೂ ಮಗ ಮನು ಬೇರೆ ಕೋಣೆಯಲ್ಲಿ ಮಲಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಸಮೀಪ ನಿಲ್ಲಿಸಿದ್ದ ಕಾರಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳಕ್ಕೆ ಕೂಡಲೇ ಗ್ರಾಮ ಆಡಳಿತಾಧಿಕಾರಿ ಬಿ.ಎನ್. ಜಯಂತ್ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮರವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡರು. ಅರಣ್ಯಾಧಿಕಾರಿ ದೇವಯ್ಯ, ಅರಣ್ಯ ರಕ್ಷಕ ಸಿದ್ಧರಾಜು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ವೆಂಕಪ್ಪ ಪೂಜಾರಿ, ಸದಸ್ಯರಾದ ಆನಂದ, ಪಾರ್ವತಿ, ಹಾಜರಿದ್ದರು.