*ಸಿದ್ದಾಪುರ, ಜು. ೨೦: ಆಡಳಿತ ವ್ಯವಸ್ಥೆಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಬಗ್ಗೆಯೇ ಹೆಚ್ಚು ಒತ್ತು ನೀಡಿ ಮಾತನಾಡುತ್ತವೆ. ಆದರೆ ಇಲ್ಲೊಂದು ಗ್ರಾಮಕ್ಕೆ ಬಸ್ ತಂಗುದಾಣದ ಭಾಗ್ಯವೇ ಇಲ್ಲದೆ ಗ್ರಾಮಸ್ಥರು ಪರಿತಪಿಸುವ ಪರಿಸ್ಥಿತಿ ಎದುರಾಗಿದೆೆ

ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಗಿರಿಜನ ಕಾಲೋನಿಯ ನಿವಾಸಿಗಳು ಬಸ್ ತಂಗುದಾಣದ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿರುವ ಸುಮಾರು ೩೦ ಕುಟುಂಬಗಳು ಬಸ್‌ಗಾಗಿ ಮಳೆ, ಚಳಿ, ಗಾಳಿಯಲ್ಲೇ ಕಾಯುತ್ತಾ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ. ಬಹಳ ವರ್ಷಗಳ ಹಿಂದೆ ಇಲ್ಲಿದ್ದ ಬಸ್ ತಂಗುದಾಣ ಶಿಥಿಲಾವಸ್ಥೆಗೊಂಡು ಬೀಳುವ ಸ್ಥಿತಿಯಲ್ಲಿತ್ತು. ಇತ್ತೀಚೆಗೆ ಸುರಿದ ಸಣ್ಣ ಮಳೆಗೆ ತಂಗುದಾಣ ಸಂಪೂರ್ಣ ಕುಸಿದು ಬಿದ್ದಿದೆ.

ತಂಗುದಾಣದ ಅವ್ಯವಸ್ಥೆಯ ಬಗ್ಗೆ ಗ್ರಾ.ಪಂ, ತಾ.ಪಂ. ಮತ್ತು ಜಿ.ಪಂ. ಗಮನಕ್ಕೆ ತಂದರೂ ಯಾವುದೇ ಸ್ಪಂದನ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಗ್ರಾ.ಪಂ. ಮಾಜಿ ಸದಸ್ಯೆ ಬಿ.ಕೆ. ಬೋಜಿ, ಇಲ್ಲಿ ವಾಸ ಇರುವವರು ದುರ್ಬಲರು ಎನ್ನುವ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಸುರಿಯುವ ಮಳೆಯಲ್ಲೇ ಮಕ್ಕಳು, ವಯೋವೃದ್ಧರು ಬಸ್‌ಗಾಗಿ ಕಾರ್ಯಬೇಕಾಗಿದೆ. ಇನ್ನಾದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಸಜ್ಜಿತ ಬಸ್ ತಂಗುದಾಣದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಅಂಚೆಮನೆ ಸುಧಿ