ಮಡಿಕೇರಿ, ಜು. ೨೦: ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಜುಲೈ ಮಾಹೆಯಲ್ಲಿ ‘ಪ್ಲಾಸ್ಟಿಕ್ ಮುಕ್ತ ಅಭಿಯಾನ’ ಕೈಗೊಂಡಿದ್ದು, ನಗರದಲ್ಲಿ ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿರ್ಬಂಧಿಸಿದ್ದು, ನಗರಸಭೆ ವತಿಯಿಂದ ಆಗ್ಗಿಂದಾಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತಿದೆ. ಈ ಕಾರ್ಯವನ್ನು ನಗರಸಭೆಯು ಮುಂದುವರೆಸಲಿದ್ದು, ಸಾರ್ವಜನಿಕರು ಹಾಗೂ ಉದ್ದಿಮೆದಾರರು ಸಹಕರಿಸುವಂತೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ಮಾರಾಟ, ದಾಸ್ತಾನು ಸಂಗ್ರಹಣೆ ಹಾಗೂ ಬಳಕೆ ಕುರಿತಂತೆ ದಂಡಗಳನ್ನು ವಿಧಿಸಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟಕ್ಕೆ ಮೊದಲನೇ ಅಪರಾಧಕ್ಕೆ ದಂಡ ರೂ. ೫೦೦, ೨ನೇ ಅಪರಾಧಕ್ಕೆ ದಂಡ ರೂ.೧,೦೦೦, ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ದಾಸ್ತಾನು ೧ ಕೆ.ಜಿ. ಮೊದಲನೇ ಅಪರಾಧಕ್ಕೆ ರೂ.೫೦೦, ಎರಡನೇ ಅಪರಾಧಕ್ಕೆ ೧೦೦೦, ೧ ರಿಂದ ೧೦ ಕೆ.ಜಿ.ವರೆಗೆ ಮೊದಲನೆ ಅಪರಾಧಕ್ಕೆ ರೂ. ೨ ಸಾವಿರ, ಎರಡನೇ ಅಪರಾಧಕ್ಕೆ ರೂ.೫ ಸಾವಿರ, ೧೦ ರಿಂದ ೫೦ ಕೆ.ಜಿ.ವರೆಗೆ ಮೊದಲನೇ ಅಪರಾಧಕ್ಕೆ ರೂ. ೫ ಸಾವಿರ, ಎರಡನೇ ಅಪರಾಧಕ್ಕೆ ರೂ. ೧೦ ಸಾವಿರ, ೫೦ ರಿಂದ ೧೦೦ ಕೆ.ಜಿ.ವರೆಗೆ ಮೊದಲನೇ ಅಪರಾಧಕ್ಕೆ ರೂ. ೧೦ ಸಾವಿರ, ಎರಡನೇ ಅಪರಾಧಕ್ಕೆ ರೂ.೨೦ ಸಾವಿರ, ೧೦೦ ಕೆ.ಜಿ.ಗೆ ಮೊದಲನೇ ಅಪರಾಧ ರೂ.೪೦ ಸಾವಿರ, ಎರಡನೇ ಅಪರಾಧಕ್ಕೆ ರೂ. ೫೦ ಸಾವಿರ, ಮೂರನೇ ಅಪರಾಧಕ್ಕೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳ ಅಕ್ರಮ ಬಳಕೆಗೆ ಮೊದಲನೇ ಅಪರಾಧಕ್ಕೆ ರೂ. ೨೦, ೨ನೇ ಅಪರಾಧಕ್ಕೆ ರೂ. ೫೦, ೩ನೇ ಅಪರಾಧಕ್ಕೆ ರೂ. ೭೫ ದಂಡ ವಿಧಿಸಲಾಗುತ್ತದೆ ಎಂದು ವಿಜಯ ತಿಳಿಸಿದ್ದಾರೆ.