ಮಡಿಕೇರಿ, ಜು. ೨೦: ಕೊಡಗು ಜಿಲ್ಲೆಯಲ್ಲಿ ಈತನಕ ಹೆಚ್ಚಿನ ಬಿರುಸು ತೋರದಂತಿದ್ದ ಮಳೆ ಇದೀಗ ಕಳೆದೆರಡು ದಿನಗಳಿಂದ ಹೆಚ್ಚಾಗುತ್ತಿದೆ. ತಾ. ೨೦ ರಿಂದ ಪುಷ್ಯ ಮಳೆ ನಕ್ಷತ್ರ ಆರಂಭಗೊAಡಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯ ರಭಸವೂ ಹೆಚ್ಚಾಗುತ್ತಿರುವದಾಗಿ ವರದಿಯಾಗಿದೆ. ಆದರೆ, ಮಡಿಕೇರಿ ವಿಭಾಗದಲ್ಲಿ ಮಳೆ ತೀವ್ರ ಇಳಿಮುಖಗೊಂಡಿದೆ. ಬೆಳಿಗ್ಗೆಯಿಂದಲೇ ಮಳೆ ಬಿಡುವು ನೀಡಿದ್ದು, ಮಧ್ಯದಲ್ಲಿ ಒಮ್ಮೊಮ್ಮೆ ಮಳೆ ಸುರಿಯುವುದು ಹೊರತುಪಡಿಸಿ ಪುಷ್ಯಮಳೆಯ ಅಬ್ಬರ ಕಂಡುಬರಲಿಲ್ಲ.
ವಿಶೇಷವಾಗಿ ಶ್ರೀಮಂಗಲ ಹಾಗೂ ಹುದಿಕೇರಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ದಿಢೀರನೆ ಗಾಳಿ - ಮಳೆಯ ಆರ್ಭಟ ಹೆಚ್ಚಾಗಿದ್ದು, ಈ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡAತಾಗಿದೆ. ಅಲ್ಲಲ್ಲಿ ಮರಗಳು ಬೀಳುತ್ತಿದ್ದು, ವಿದ್ಯುತ್ ಸಂಪರ್ಕಕ್ಕೂ ಅಡಚಣೆಯಾಗಿದೆ. ವಿದ್ಯುತ್ ಪೂರೈಕೆಯಿಲ್ಲದೆ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಲೂ ಜನರು ಪರದಾಡುವಂತಾಗಿದೆ. ಎರಡು ಹೋಬಳಿಯ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಪ್ರತಿದಿನ ಸರಾಸರಿ ೩-೪ ಇಂಚಿನಷ್ಟು ಮಳೆ ಸುರಿಯುತ್ತಿದೆ. ಇದರೊಂದಿಗೆ ಗಾಳಿಯ ರಭಸವೂ ಹೆಚ್ಚಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ವಿಭಾಗದಲ್ಲಿ ಏಕಾಏಕಿ ಈ ರೀತಿಯ ಬದಲಾವಣೆ ಆಶ್ಚರ್ಯಕರವಾಗಿದೆ. ಈ ಪ್ರದೇಶ ಕೇರಳ ರಾಜ್ಯದ ಗಡಿಯಲ್ಲಿ ಬರುತ್ತಿದ್ದು, ಕೇರಳ ಸರಕಾರ ಮೋಡ ಬಿತ್ತನೆ ಮಾಡಿದೆಯೇ ಎಂಬ ಸಂಶಯ ಎದುರಾಗುತ್ತಿದೆ ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ.
ಈ ತನಕ ಮಳೆಯ ಪ್ರಮಾಣ ಕಡಿಮೆಯಿದ್ದು, ಆಗಾಗ್ಗೆ ಬಿಸಿಲು ಕಂಡುಬರುತ್ತಿದ್ದರಿAದ ಕಾಯಿಗಟ್ಟಿದ ಕಾಫಿ ಇದೀಗ ದಿಢೀರ್ ಬದಲಾವಣೆಗೆ ತುತ್ತಾಗುತ್ತಿದೆ. ದಪ್ಪವಾಗುತ್ತಿದ್ದ ಕಾಫಿ ಉದುರುವಿಕೆಯೊಂದಿಗೆ ಗಿಡದಲ್ಲೇ ಕೊಳೆಯುವಂತಾಗಿದೆ ಎಂದು ಶ್ರೀಮಂಗಲ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಅಜ್ಜಮಾಡ ಚಂಗಪ್ಪ ‘ಶಕ್ತಿ’ಗೆ ತಿಳಿಸಿದ್ದು, ಜಿಲ್ಲಾಡಳಿತ, ಸರಕಾರ ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ ಎಂದು ಮನವಿ ಮಾಡಿದ್ದಾರೆ. ಶ್ರೀಮಂಗಲ, ಕುರ್ಚಿ, ಬೀರುಗ, ಮಂಚಳ್ಳಿ, ಕುಟ್ಟ, ಟಿ. ಶೆಟ್ಟಿಗೇರಿ,
(ಮೊದಲ ಪುಟದಿಂದ) ಬಿರುನಾಣಿ, ತೆರಾಲು, ಪರಕಟಗೇರಿ, ಬಾಡಗರಕೇರಿ, ಹುದಿಕೇರಿ, ಹೈಸೊಡ್ಲೂರು ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿ ಮಳೆ ಹೆಚ್ಚಿದೆ.
ಕಳೆದ ಮೂರು ದಿನಗಳಿಂದ ಈ ವ್ಯಾಪ್ತಿಯಲ್ಲಿ ಗಾಳಿ ಮಳೆ ಜೋರಾಗಿದ್ದು, ಘಟ್ಟ ಪ್ರದೇಶವಾದ ಅಂಚಿನಲ್ಲಿರುವ ಬಿರುನಾಣಿ, ಹುದಿಕೇರಿ, ಶ್ರೀಮಂಗಲ ಟಿ- ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಭತ್ತದ ಕೃಷಿ ಮಾಡಲು ಉಳುಮೆ ಮಾಡಿರುವ ಗದ್ದೆಗಳಲ್ಲಿ ನೀರಾಗಿದ್ದು, ಪ್ರಸಕ್ತ ಮುಂಗಾರು ಅವಧಿಯಲ್ಲಿ ಇದೇ ಮೊದಲ ಬಾರಿಗೆ ಈ ವ್ಯಾಪ್ತಿಯಲ್ಲಿ ಇಷ್ಟೊಂದು ಮಳೆ ಬಿರುಸು ಪಡೆದಿದೆ.
ಗುರುವಾರವು ಸಹ ಈ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.ಬಲ್ಯ ಮುಂಡೂರು, ನಾಲ್ಕೇರಿ, ಕುಟ್ಟ ವ್ಯಾಪ್ತಿಯಲ್ಲಿಯೂ ಮಳೆಯಾಗಿದೆ. ಪಶ್ಚಿಮ ಘಟ್ಟದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಇಲ್ಲಿನ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ಕಕ್ಕಟ್ಟ್ ಪೊಳೆ ನದಿ ಮತ್ತು ಲಕ್ಷö್ಮಣ ತೀರ್ಥ ನದಿಯಲ್ಲಿ ಈ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ನೀರಿನ ಮಟ್ಟ ಏರಿಕೆ ಕಂಡಿದೆ.
ಜಿಲ್ಲೆಯ ಇತರೆಡೆಗಳಲ್ಲೂ ಎರಡು ದಿನಗಳಿಂದ ಮಳೆ ಚುರುಕಾಗಿದೆ. ನಿರಂತರವಾಗಿ ಮಳೆ ಸುರಿಯದಿದ್ದರೂ ಆಗಾಗ್ಗೆ ರಭಸದ ಮಳೆಯಾಗುತ್ತಿದೆ. ಆದರೆ ತಕ್ಷಣವೇ ಕೆಲಹೊತ್ತು ಮತ್ತೆ ಬಿಡುವು ನೀಡುತ್ತಿರುವ ಪರಿಸ್ಥಿತಿ ಬಹುತೇಕ ಜಿಲ್ಲೆಯಾದ್ಯಂತ ಪ್ರಸ್ತುತ ಕಂಡು ಬರುತ್ತಿದೆ.
ಮಳೆ ವಿವರ
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೧.೭೦ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧.೨೮, ವೀರಾಜಪೇಟೆ ೧.೪೦ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೨.೪೨ ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯಲ್ಲಿ ೪.೦೮ ಇಂಚು ಹಾಗೂ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯಲ್ಲಿ ೬.೧೬ ಇಂಚಿನಷ್ಟು ಭಾರೀ ಮಳೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದಿದೆ.
ಉಳಿದಂತೆ ಮಡಿಕೇರಿ ಕಸಬಾ ೧.೫೪, ನಾಪೋಕ್ಲು ೧.೧೪, ಸಂಪಾಜೆ ೦.೭೬ ಹಾಗೂ ಭಾಗಮಂಡಲ ಹೋಬಳಿಯಲ್ಲಿ ೧.೭೦ ಇಂಚು ಮಳೆಯಾಗಿದೆ. ಹುದಿಕೇರಿ ೧.೨೨, ಪೊನ್ನಂಪೇಟೆ ೧.೧೨, ಬಾಳೆಲೆ ೨.೫೦, ಸೋಮವಾರಪೇಟೆ ಕಸಬಾ ೩.೨೦, ಶನಿವಾರಸಂತೆ ೩.೨೫, ಕೊಡ್ಲಿಪೇಟೆ ೧.೨೩, ಸುಂಟಿಕೊಪ್ಪ ೦.೬೪ ಇಂಚು ಮಳೆ ಕಳೆದ ೨೪ ಗಂಟೆಗಳಲ್ಲಿ ದಾಖಲಾಗಿದೆ.