ಕೂಡಿಗೆ, ಜು. ೨೧: ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ಜಮಾಅತ್ ಸಮಿತಿ ಆಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಕ್ತ ನಿಧಿ ಕೇಂದ್ರದ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ನೂರುಲ್ ಇಸ್ಲಾಂ ಮದರಸದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ನಂಜರಾಯ ಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಜಮಾಅತ್ ಮೂಲಕ ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಈ ಭಾಗದ ದಾನಿಗಳಿಗೆ ಒಂದು ವೇದಿಕೆ ಕಲ್ಪಿಸಿದಂತಾಗಿದೆ. ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ. ಕಮಿಟಿಯ ಈ ಸಾಮಾಜಿಕ ಕಾರ್ಯಕ್ರಮಗಳಿಗೆ ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಮಸೀದಿ ಧರ್ಮ ಗುರು ಬಷೀರ್ ಅಜ್ಹರಿ ಕತ್ತಲೆಕಾಡು ಮಾತನಾಡಿ, ಮದರಸ ಎಂಬುದು ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಎಂಬ ವಿಚಾರ ಹೊರತು ಪಡಿಸಿ ಇಂತಹ ಸಮಾಜಮುಖಿ ಚಿಂತನೆಗಳಿಗೆ ಜೀವ ಕೊಡುವ ಕೇಂದ್ರವಾಗಿಯೂ ತನ್ನ ಕಾರ್ಯ ವಿಸ್ತರಿಸಿದೆ. ಪ್ರತಿಯೊಬ್ಬರು ಕೂಡ ಆರೋಗ್ಯವಂತ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದ ಬೇಕಿರುವುದು ಅವಶ್ಯಕವಾಗಿದೆ.
ಎಲ್ಲಾ ದಾನಕ್ಕಿಂತ ಶ್ರೇಷ್ಠವಾದ ರಕ್ತದಾನಕ್ಕೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕಿದೆ ಎಂದರು. ಮಡಿಕೇರಿಯ ರಕ್ತನಿಧಿ ಕೇಂದ್ರದ ಡಾ. ಕರುಂಬಯ್ಯ ಮಾತನಾಡಿ, ರಕ್ತದಾನ ಮಹತ್ವ ಹಾಗೂ ಪ್ರಯೋಜನಗಳ ಬಗ್ಗೆ ಅರಿತುಕೊಂಡು ರಕ್ತದಾನಕ್ಕೆ ಮುಂದಾಗಿ ರಕ್ತದ ಕೊರತೆ ನೀಗಿಸಬೇಕಿದೆ ಎಂದು ಕರೆ ನೀಡಿದರು.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಮಾವಾಜಿ ರಕ್ಷಿತ್ ಈ ಸಂದರ್ಭ ಮಾತನಾಡಿದರು. ಜಮಾಅತ್ ಕಮಿಟಿ ಅಧ್ಯಕ್ಷ ಎಂ.ಎ. ಅಮೀರ್ ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಕ್ತದಾನ ಮಾಡಿದ ೬೦ಕ್ಕೂ ಅಧಿಕ ಮಂದಿಗೆ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸಮೀರ, ಸದಸ್ಯರುಗಳಾದ ಆರ್.ಕೆ. ಚಂದ್ರ, ಕುಸುಮ, ಜಾಜಿ, ಗಿರಿಜಮ್ಮ, ಮಸೀದಿ ಧರ್ಮಗುರು ಜುಬೇರ್ ಮುಸ್ಬಾಹಿ, ಸಮಿತಿ ಉಪಾಧ್ಯಕ್ಷ ಎಂ.ಎ. ಬಷೀರ್, ಮಾಜಿ ಅಧ್ಯಕ್ಷ ಅಬ್ದುಲ್ಲಾ, ಕೆ.ಪಿ. ಮಹಮ್ಮದ್, ಕಾರ್ಯದರ್ಶಿ ಹ್ಯಾರಿಸ್, ಸಹ ಕಾರ್ಯದರ್ಶಿ ಅನೀಶ್, ಖಜಾಂಚಿ ಎಂ.ಎA. ಹ್ಯಾರಿಸ್, ಯೂತ್ ಕಮಿಟಿ ಅಧ್ಯಕ್ಷ ಹನೀಫ್ ಅಶ್ರಫಿ, ಪ್ರಮುಖರಾದ ನೌಶಾದ್, ಶರೀಫ್, ಹಂಸ, ನಜೀರ್, ರಫೀಕ್, ಅಲಿ, ಶಫೀರ್, ಫಯಾಜ್, ಆಶಿಕ್, ಅರ್ಷಾದ್, ಬಷೀರ್, ಖಲೀಲ್, ಇರ್ಷಾದ್ ಮತ್ತಿತರರು ಇದ್ದರು.