ಸೋಮವಾರಪೇಟೆ, ಜು. ೨೧: ಡಾ. ಮಂಥರ್ಗೌಡ ಅಭಿಮಾನಿಗಳ ಬಳಗದ ವತಿಯಿಂದ ತಾ. ೨೪ ರಂದು ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂಥರ್ಗೌಡ ಅವರನ್ನು ಸನ್ಮಾನಿಸಲಾಗುವುದು ಎಂದು ಬಳಗದ ಜಿಲ್ಲಾಧ್ಯಕ್ಷ ಡಿ. ಸುಜಿತ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಮಾನಿ ಬಳಗ ನೋಂದಾಯಿತ ಸಂಘಟನೆಯಾಗಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ನಡೆಯುವ ಸಮಾರಂಭದಲ್ಲಿ ಶಾಸಕ ಮಂಥರ್ ಗೌಡ ಅವರನ್ನು ಸನ್ಮಾನಿಸಿ, ಸಂಘಟನೆಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಬಡವರ, ದೀನದಲಿತರು, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಬಳಗವನ್ನು ಹುಟ್ಟು ಹಾಕಲಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಬಡವರಿಗೆ ತಲುಪಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಬಡತನ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ಉಪಾಧ್ಯಕ್ಷ ಎ. ಅಬ್ದುಲ್ ರಜಾಕ್, ಮಾಧ್ಯಮ ವಕ್ತಾರ ಜಿ.ಆರ್. ಸುಹಾಸ್, ಕಾರ್ಯದರ್ಶಿ ಹೆಚ್.ಪಿ. ಸಂತೋಷ್ ಕುಮಾರ್, ಖಜಾಂಚಿ ಟಿ.ಸಿ. ಸತೀಶ್ ಇದ್ದರು.