ಸೋಮವಾರಪೇಟೆ, ಜು. ೨೧: ಪುನರ್ವಸು ಮಳೆ ಕೊನೆಯ ದಿನಗಳಲ್ಲಿ ಚುರುಕುಗೊಂಡ ನಂತರ ಆರಂಭವಾದ ಪುಷ್ಯ ಮಳೆ ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿದ್ದು, ಮಳೆಯೊಂದಿಗೆ ಗಾಳಿಯೂ ರಭಸವಾಗುತ್ತಿರುವ ಹಿನ್ನೆಲೆ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ.

ಕಳೆದ ಐದಾರು ದಿನಗಳಿಂದ ಮಲೆನಾಡು ವಾತಾವರಣ ಹೊಂದಿರುವ ಸೋಮವಾರಪೇಟೆ ವಿಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಸಣ್ಣಪುಟ್ಟ ನದಿತೊರೆ, ಹಳ್ಳಕೊಳ್ಳಗಳು ತುಂಬಲಾರAಭಿಸುತ್ತಿವೆ. ಪುಷ್ಪಗಿರಿ ಬೆಟ್ಟಶ್ರೇಣಿ ಭಾಗದಲ್ಲಿ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ.

ಪುಷ್ಯ ಮಳೆಯು ಪ್ರಥಮ ದಿನದಿಂದಲೇ ಆರ್ಭಟ ಆರಂಭಿಸಿರುವ ಪರಿಣಾಮ ಮಳೆಗಾಲದ ನೈಜ ಚಿತ್ರಣ ಇದೀಗ ಕಂಡುಬರುತ್ತಿದೆ. ಸೋಮವಾರಪೇಟೆ ಪಟ್ಟಣಕ್ಕೆ ಒತ್ತಿಕೊಂಡAತೆ ಇರುವ ಬೆಟ್ಟಗುಡ್ಡಗಳ ಗ್ರಾಮ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೆ, ಸಮತಟ್ಟು ಪ್ರದೇಶಗಳಿಗೆ ಅಷ್ಟಾಗಿ ಮಳೆಯಾಗದಿರುವುದು ಆ ಭಾಗಗಳಲ್ಲಿ ಕೃಷಿ ಕಾರ್ಯಗಳಿಗೆ ಹಿನ್ನಡೆ ಆಗುತ್ತಿದೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಶಾಂತಳ್ಳಿ, ಬೆಟ್ಟದಳ್ಳಿ, ಕೊತ್ನಳ್ಳಿ, ಕುಡಿಗಾಣ, ಮಲ್ಲಳ್ಳಿ, ನಾಡ್ನಳ್ಳಿ, ತಡ್ಡಿಕೊಪ್ಪ, ಹರಗ, ಬೆಂಕಳ್ಳಿ, ಹೆಗ್ಗಡಮನೆ, ಬೀಕಳ್ಳಿ, ತೋಳೂರುಶೆಟ್ಟಳ್ಳಿ, ಕೂತಿ, ಎಡದಂಟೆ, ಹರಪಳ್ಳಿ, ಹಾನಗಲ್ಲು, ಚೌಡ್ಲು, ಗೌಡಳ್ಳಿ, ಐಗೂರು, ಕಿರಗಂದೂರು, ತಾಕೇರಿ, ಗರ್ವಾಲೆ, ಸೂರ್ಲಬ್ಬಿ, ಮಂಕ್ಯ, ದೊಡ್ಡಮಳ್ತೆ, ಹೊನ್ನವಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.

ಪುಷ್ಪಗಿರಿ ಬೆಟ್ಟತಪ್ಪಲು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕುಮಾರಧಾರ ನದಿ ತುಂಬುತ್ತಿದ್ದು, ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತದಲ್ಲಿ ನೀರಿನ ಭೋರ್ಗರೆತ ಆರಂಭಗೊAಡಿದೆ. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ತಾಲೂಕಿನಲ್ಲಿ ಪ್ರಸಕ್ತ ವರ್ಷ ೧೧ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗದ್ದೆ ಕೆಲಸ ಭರದಿಂದ ನಡೆಯುತ್ತಿದೆ. ಈಗಾಗಲೇ ಗದ್ದೆಗಳನ್ನು ಉಳುಮೆ ಮಾಡಿ, ಸಸಿಮಡಿ ತಯಾರಿ ಮಾಡಲಾಗಿದೆ.

ತೊಳೂರುಶೆಟ್ಟಳ್ಳಿ ಭಾಗದಲ್ಲಿಯೂ ಕೃಷಿ ಕಾರ್ಯ ಚುರುಕುಗೊಂಡಿದ್ದು, ಕೂತಿ ಗ್ರಾಮದಲ್ಲಿ ಹಲವಷ್ಟು ಕೃಷಿಕರು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಹುತೇಕ ಗದ್ದೆಗಳಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಗೌಡಳ್ಳಿ, ದೊಡ್ಡಮಳ್ತೆ ಭಾಗದಲ್ಲಿಯೂ ಗದ್ದೆಗಳ ಉಳುಮೆ ಪ್ರಗತಿಯಲ್ಲಿದ್ದು, ಬಾಣಾವರ, ಗೋಣಿಮರೂರು, ಗಣಗೂರು ಭಾಗದಲ್ಲಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಪ್ರಸಕ್ತ ವರ್ಷ ಮುಂಗಾರು ಮಳೆ ಒಂದೂವರೆ ತಿಂಗಳ ಕಾಲ ವಿಳಂಬವಾದ್ದರಿAದ ಕೃಷಿ ಕಾರ್ಯಗಳೂ ಸಹ ವಿಳಂಬವಾಗಿ ಆರಂಭಗೊAಡಿದೆ. ಇದು ಫಸಲು ಕೊಯ್ಲಿನ ಸಂದರ್ಭ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಕಾದು ನೋಡಬೇಕಿದೆ.

ಶೀತಮಯ ವಾತಾವರಣ ನಿರ್ಮಾಣಗೊಂಡಿದ್ದು, ಮಳೆಗಾಲದ ಬಟ್ಟೆ, ರೈನ್‌ಕೋಟ್, ಶೂಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಚೀಲಗಳು, ಟಾರ್ಪಲ್‌ಗಳ ಖರೀದಿಯ ಭರಾಟೆ ಜೋರಾಗಿದೆ. ಮಳೆಯೊಂದಿಗೆ ಗಾಳಿಯೂ ಜೋರಾಗಿರುವ ಹಿನ್ನೆಲೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೆಲವೆಡೆ ರಸ್ತೆಗಳಿಗೆ ಮರ ಬೀಳುತ್ತಿದ್ದು, ಸ್ಥಳೀಯರೇ ತೆರವು ಮಾಡುತ್ತಿದ್ದಾರೆ. ಸಣ್ಣಪುಟ್ಟ ಬರೆ ಕುಸಿತಗಳು ಉಂಟಾಗುತ್ತಿವೆ. ಒಟ್ಟಾರೆ ವಾಡಿಕೆಗಿಂತ ಒಂದೂವರೆ ತಿಂಗಳ ನಂತರ ಮಳೆಗಾಲ ಆರಂಭಗೊAಡ ವಾತಾವರಣ ಮೂಡಿದೆ.

ಕಳೆದ ೪೮ ಗಂಟೆಗಳ ಅವಧಿಯಲ್ಲಿ ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೭೦ ಮಿ.ಮೀ., ಶನಿವಾರಸಂತೆಯಲ್ಲಿ ೧೩೨.೦೪ ಮಿ.ಮೀ, ಶಾಂತಳ್ಳಿಗೆ ೨೩೩.೦೨ ಮಿ.ಮೀ., ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೧೪೫.೦೨ ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.