ಕೂಡಿಗೆ, ಜು. ೨೧: ಈ ಸಾಲಿನಲ್ಲಿ ಶುಂಠಿ ಬೆಳೆಗೆ ಬೆಲೆ ಏರಿಕೆಯಾಗಿರುವುದು ರೈತಾಪಿ ವರ್ಗದ ಸಂತಸಕ್ಕೆ ಕಾರಣವಾಗಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅನೇಕ ರೈತರು ಈ ಬಾರಿ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆ ಬೆಳೆಯಲು ಜನವರಿ ತಿಂಗಳಿAದಲೇ ಮುಂದಾಗಿ ಅಗತ್ಯ ತಯಾರಿ ಮಾಡಿಕೊಂಡಿದ್ದರು. ಉತ್ತಮ ಗುಣಮಟ್ಟದ ಬಿತ್ತನೆ ಬೀಜದ ಶುಂಠಿಯನ್ನು ಖರೀದಿಸಿ ಅದಕ್ಕೆ ಬೇಕಾಗುವ ರೋಗ ನಿರೋಧಕ ಶಕ್ತಿಯ ಔಷಧೀಯ ಹಾಕಿ, ಕೊಳವೆ ಬಾವಿಗಳಿಂದ ನೀರನ್ನು ಬಳಕೆ ಮಾಡಿ ಶುಂಠಿ ಬೆಳೆಯನ್ನು ಬೆಳೆದ ಹಿನ್ನೆಲೆಯಲ್ಲಿ ಈಗಾಗಲೇ ಶುಂಠಿ ಪಾತಿಗಳಲ್ಲಿ ಹೆಚ್ಚು ಮೊಳಕೆ ಒಡೆಯುವ ಮೂಲಕ ಉತ್ತಮವಾಗಿ ಬೆಳೆಯುತ್ತಿದೆ.

ತಾಲೂಕು ವ್ಯಾಪ್ತಿಯಲ್ಲಿ ಮುಂಗಾರು ಮಳೆ ಪ್ರಮಾಣವು ಕಡಿಮೆ ಅದ ಹಿನ್ನೆಲೆಯಲ್ಲಿ ಶುಂಠಿ ಜಮೀನಿನಲ್ಲಿ ಹೆಚ್ಚು ಶೀತವಾಗದ ಕಾರಣದಿಂದಾಗಿ ಬೆಳೆ ಸಮೃದ್ಧವಾಗಿ ಬೆಳೆದಿದೆ. ಈಗಾಗಲೇ ಬಿತ್ತನೆ ಮಾಡಿ ೫ ತಿಂಗಳು ಕಳೆಯುತ್ತಾ ಬಂದಿದೆ. ಉತ್ತಮವಾಗಿ ಬೆಳೆದ ಹಿನ್ನೆಲೆಯಲ್ಲಿ ದಪ್ಪದಾಗಿ ಗೇಡೆಯು ಕಟ್ಟುತ್ತಿದೆ. ಅದೇ ರೀತಿಯಲ್ಲಿ ರೋಗದ ಪ್ರಮಾಣವು ಸಹ ಹಿಂದಿಗಿAತ ಕಡಿಮೆ ಇದೆ. ಈ ಸಾಲಿನಲ್ಲಿ ಕಳೆದ ಆರು ವರ್ಷಗಳ ಹಿಂದೆ ಇದ್ದ ಶುಂಠಿ ಬೆಳೆ ಬೆಲೆಯು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇಂದು ಹೊಸ ಶುಂಠಿಯ ಒಂದು ಮೂಟೆ ಚೀಲಕ್ಕೆ ಅಂದರೆ ೬೦ ಕೆ.ಜಿ. ಶುಂಠಿಯ ಬೆಲೆ ರೂ. ೬ ಸಾವಿರದಿಂದ ೭ ಸಾವಿರಕ್ಕೆ ತಲುಪಿದೆ. ಕಳೆದ ಸಾಲಿನಲ್ಲಿ ಹೊಸ ಶುಂಠಿ ಕೇವಲ ೧,೨೦೦ ರೂ.ಗಳು ಮಾತ್ರ ಇತ್ತು. ಇದೀಗ ಭಾರೀ ಬೆಲೆಯಾಗಿದೆ. ಇದರ ಜೊತೆಯಲ್ಲಿ ಶುಂಠಿಯ ಜಮೀನಿನಲ್ಲಿ ಕಳ್ಳತನ ಆಗಬಹುದು ಎಂದು ಶುಂಠಿ ಬೆಳೆದ ರೈತರು ರಾತ್ರಿ ವೇಳೆಯಲ್ಲಿ ತಮ್ಮ ಜಮೀನಿನಲ್ಲಿ ಕಾವಲು ಕಾಯುತ್ತಿರುವುದು ಕಂಡುಬರುತ್ತಿದೆ.

- ಕೆ.ಕೆ. ನಾಗರಾಜಶೆಟ್ಟಿ