ಮೂರ್ನಾಡು, ಜು. ೨೧: ಇಲ್ಲಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಸ್ವಾಮಿ ವಿವೇಕಾನಂದರ ಅಧ್ಯಾತ್ಮಿಕ ಪ್ರಯೋಗ ಶಾಲೆ ಅಧಿಕಾರಿ ಯಶವಂತ್ ಡಿ.ಎಸ್. ಮಾತನಾಡಿ, ವಿದ್ಯಾರ್ಥಿಗಳು ಗುರು-ಹಿರಿಯರಿಗೆ ವಿಧೇಯರಾಗಿ, ಪ್ರಾಮಾಣಿಕತೆ, ಪರೋಪಕಾರತೆ, ದೇಶಪ್ರೇಮ, ಸರ್ವಧರ್ಮ ಸಮನ್ವಯತೆ, ಸಹೋದರತ್ವದ ಭಾವನೆಯನ್ನು ಬೆಳೆಸಿಕೊಂಡು ಮಾನವೀಯ ಮೌಲ್ಯಗಳನ್ನು, ಪ್ರಕೃತಿಯ ಶ್ರೇಷ್ಠತೆಯನ್ನು ಅರಿತು, ವಸುದೈವ ಕುಟುಂಬಕA, ಸರ್ವೇ ಜನೋ ಸುಖಿಃನೋ ಭವಂತು ಎಂಬ ವಿಶಾಲತೆಯ ಮನೋಭಾವವನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕೆಂದು ಹಿತನುಡಿಗಳನ್ನಾಡಿದರು.
ಸಮಾರಂಭವನ್ನು ಉದ್ದೇಶಿಸಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕಿ ಶೀಲಾ ಅಬ್ದುಲ್ಲಾ ಪ್ರತಿಜ್ಞಾವಿಧಿ ಬೋಧಿಸಿದರು. ಶಾಲಾ ನಾಯಕನಾಗಿ ಪ್ರಜ್ವಲ್ ಪೊನ್ನಣ್ಣ, ಉಪನಾಯಕನಾಗಿ ಆಯುಷ್ ಅಚ್ಚಯ್ಯ, ಕ್ರೀಡಾ ನಾಯಕಿಯಾಗಿ ಸ್ವಾತಿ, ಸಾಂಸ್ಕೃತಿಕ ನಾಯಕಿಯಾಗಿ ಸಫ, ಶಿಸ್ತು ಪರಿಪಾಲನಾ ನಾಯಕನಾಗಿ ಅನ್ಶಾದ್, ಆರೋಗ್ಯ ಪರಿಪಾಲನಾ ನಾಯಕನಾಗಿ ಡ್ಯಾನಿಲ್ ಮತ್ತು ವಾರ್ತಾಧಿಕಾರಿಯಾಗಿ ಜಯಸ್ವರೂಪ್ ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಬಡುವಂಡ ಬೆಲ್ಲು ಚಿಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.