ಸೋಮವಾರಪೇಟೆ, ಜು. ೨೧: ಇಲ್ಲಿನ ಪಟ್ಟಣ ಪಂಚಾಯಿತಿಗೆ ಒಳಪಡುವ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಅಳವಡಿಸಿರುವ ಇಂಟರ್ಲಾಕ್ಗಳನ್ನು ಕಿತ್ತಿರುವ ಪಟ್ಟಣ ಪಂಚಾಯಿತಿ ನಂತರ ನೂತನ ಇಂಟರ್ಲಾಕ್ಗಳನ್ನು ಅಳವಡಿಸದೇ ಹಾಗೆಯೇ ಬಿಟ್ಟಿರುವುದರಿಂದ ಮಕ್ಕಳು, ವೃದ್ಧರು ಓಡಾಡಲು ಸಮಸ್ಯೆಯಾಗಿದೆ.
ಕಳೆದ ಒಂದು ತಿಂಗಳ ಹಿಂದೆಯೇ ಮಳೆಗಾಲ ನಿರ್ವಹಣೆಯ ಪೂರ್ವಭಾವಿಯಾಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಚರಂಡಿಯನ್ನು ಶುಚಿಗೊಳಿಸಲು ಸ್ಲಾö್ಯಬ್ಗಳನ್ನು ತೆಗೆಯಲಾಗಿದ್ದು, ಇದೇ ಸಮಯದಲ್ಲಿ ಹಳೆಯದಾದ ಇಂಟರ್ಲಾಕ್ಗಳ ಬದಲಿಗೆ ಹೊಸ ಇಂಟರ್ಲಾಕ್ಗಳನ್ನು ಅಳವಡಿಸಲು ನಿರ್ಧರಿಸಲಾಗಿತ್ತು.
ಚರಂಡಿ ಸ್ವಚ್ಛಗೊಂಡ ನಂತರ ಸ್ಲಾö್ಯಬ್ಗಳನ್ನು ಅಳವಡಿಸಲಾಗಿದ್ದು, ನೂತನವಾಗಿ ಇಂಟರ್ಲಾಕ್ಗಳನ್ನು ಅಳವಡಿಸದೇ ಹಾಗೆಯೇ ಬಿಡಲಾಗಿದೆ. ಕಿತ್ತು ಹಾಕಿರುವ ಇಂಟರ್ಲಾಕ್ಗಳನ್ನು ಅಲ್ಲಲ್ಲೇ ಇಡಲಾಗಿದ್ದು, ಮಕ್ಕಳು, ವಯೋವೃದ್ಧರು ಎಡವಿ ಬೀಳುವುದು ಮಾಮೂಲಾಗಿದೆ.
ನಗರೋತ್ಥಾನ ಯೋಜನೆಯಡಿ ನೂತನ ಇಂಟರ್ಲಾಕ್ಗೆ ಅಳವಡಿಸಲು ಅನುದಾನ ಮೀಸಲಿಟ್ಟಿದ್ದರೂ, ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹೊಸ ಇಂಟರ್ಲಾಕ್ ಹಾಕಿಲ್ಲ. ಈ ಹಿಂದೆ ತೆಗೆದಿರುವ ಹಳೆ ಇಂಟರ್ಲಾಕ್ನ್ನೂ ಸಹ ಅಳವಡಿಸಿಲ್ಲ. ಇದರಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಈ ಬಗ್ಗೆ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸಂಪರ್ಕಿಸಿದ ಸಂದರ್ಭ, ಹಳೆಯ ಇಂಟರ್ಲಾಕ್ಗಳನ್ನು ಬದಲಾಯಿಸುವ ಬಗ್ಗೆ ಕೆಲವರು ಆಕ್ಷೇಪಿಸಿದ್ದರಿಂದ ಹಾಗೆಯೇ ಬಿಡಲಾಗಿದೆ. ಇದೀಗ ತೆಗೆದಿರುವ ಇಂಟರ್ಲಾಕ್ಗಳನ್ನೇ ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ತಕ್ಷಣ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.