ಸೋಮವಾರಪೇಟೆ, ಜು. ೧೯: ತನ್ನ ಮಾವ ಹಾಗೂ ಅತ್ತೆ ಜೀವಂತವಿದ್ದಾಗಲೇ ಅವರುಗಳ ಮರಣ ದೃಢೀಕರಣ ಪತ್ರ ಮಾಡಿಸಿ ಆಸ್ತಿಯ ಮೇಲೆ ಹಿಡಿತ ಸಾಧಿಸಲು ನಡೆದಿರುವ ಪ್ರಯತ್ನಕ್ಕೆ ಖುದ್ದು ಗ್ರಾಮ ಲೆಕ್ಕಾಧಿಕಾರಿಯೇ ಬೆನ್ನೆಲುಬಾಗಿ ನಿಂತು ಬದುಕಿರುವವರನ್ನೂ ಸಾಯಿಸಿ ಪತ್ರದಲ್ಲಿ ದೃಢೀಕರಣ ನೀಡಿರುವ ಪ್ರಕರಣ ತೋಳೂರುಶೆಟ್ಟಳ್ಳಿಯಿಂದ ಬೆಳಕಿಗೆ ಬಂದಿದೆ.

ಶಾAತಳ್ಳಿ ಕಂದಾಯ ಹೋಬಳಿ ವ್ಯಾಪ್ತಿಯ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ದೊಡ್ಡತೋಳೂರು ಗ್ರಾಮದ ನಿವಾಸಿ ರುದ್ರಪ್ಪ ಅವರಿಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ವಂಚನೆ ನಡೆಸ ಲಾಗಿದ್ದು, ರುದ್ರಪ್ಪ ಹಾಗೂ ಇವರ ಪತ್ನಿ ಪಾರ್ವತಿ ಬದುಕಿದ್ದಾಗಲೇ ಇವರುಗಳ ಮರಣ ದೃಢೀಕರಣ ಪತ್ರ ಮಾಡಿಸಿ ಪೌತಿ ಖಾತೆಯ ಮೂಲಕ ಆಸ್ತಿಗೆ ಸಂಬAಧಿಸಿದ ಆರ್‌ಟಿಸಿಯಲ್ಲಿ ಹೆಸರು ನೋಂದಾವಣೆಯಾಗುವAತೆ ಮಾಡಲಾಗಿದೆ.

ರುದ್ರಪ್ಪ ಅವರ ಪುತ್ರ ಎ.ಆರ್. ರಜಿತ್ ಅವರು ತಮ್ಮ ತಂದೆ ನಿಧನರಾದ ನಂತರ ಪೌತಿ ಖಾತೆ ಆಂದೋಲನದಡಿ ಪೌತಿ ಖಾತೆ ಮಾಡಿಸಲು ದಾಖಲಾತಿಗಳನ್ನು ಸಂಗ್ರಹಿಸಿ ಕಂದಾಯ ಇಲಾಖೆಗೆ ಸಲ್ಲಿಸಿದ ಸಂದರ್ಭ ಮಹಾ ವಂಚನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ರಜಿತ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿಗೆ ಸಂಬAಧಿಸಿ ದಂತೆ ಠಾಣೆಯಲ್ಲಿ ಎಫ್‌ಐಆರ್ ೦೦೯೮/೨೦೨೩ ಅಡಿಯಲ್ಲಿ ಕಲಂ ೧೮೬೦ (ಯುಎಸ್-೪೬೫,೪೬೮, ೪೭೧,೪೨೦,೩೪ ಅನ್ವಯ ದೊಡ್ಡತೋಳೂರಿನ ಡಿ.ಕೆ. ಪರಮೇಶ, ಕಮಲಮ್ಮ, ಕೃಷ್ಣಪ್ಪ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ ಅವರುಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ದೊಡ್ಡತೋಳೂರು ಗ್ರಾಮದ ರುದ್ರಪ್ಪ ಅವರು ೦೭.೦೧.೨೦೨೩ರಂದು ನಿಧನರಾಗಿದ್ದು, ಇವರ ಮರಣಾನಂತರ ಮೇ ತಿಂಗಳಿನಲ್ಲಿ ಪೌತಿ ಖಾತೆ ಮಾಡಿಸಲು ಪುತ್ರ ರಜಿತ್ ಅವರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ವೆ ನಂ.೧೪೪/೧ರಲ್ಲಿ ೬೦ ಸೆಂಟ್ ಹಾಗೂ ಸರ್ವೆ ನಂಬರ್ ೬೧/೨ರಲ್ಲಿ ೧.೧೯ ಎಕರೆ ಜಾಗಕ್ಕೆ ಸಂಬAಧಿಸಿದAತೆ ಆರ್‌ಟಿಸಿ ಯಲ್ಲಿರುವ ತಂದೆಯ ಹೆಸರನ್ನು ತೆಗೆಸಿ ಪೌತಿ ಖಾತೆ ಮಾಡಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭ ಆಸ್ತಿಯ ದಾಖಲಾತಿಗಳನ್ನು ಪರಿಶೀಲನೆಗೆ ಒಳಪಡಿಸಿದ್ದು, ರುದ್ರಪ್ಪ ಅವರ ಹೆಸರನ್ನು ಅವರು ಬದುಕಿದ್ದಾಗಲೇ ೦೭.೦೭.೨೦೧೭ರಲ್ಲಿ ತೆಗೆದು ಹಾಕಿರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೇ ಅವರ ಹೆಸರಿನ ಬದಲಿಗೆ ರುದ್ರಪ್ಪ ಅವರ ಸಹೋದರಿ ಕಾಳಮ್ಮ, ಗಂಡ ಕೃಷ್ಣಪ್ಪ, ಮಗ ಪರಮೇಶ ಅವರುಗಳ ಹೆಸರನ್ನು ಸೇರ್ಪಡೆ ಮಾಡಲಾಗಿದೆ.

ಈ ಬಗ್ಗೆ ಸಂಶಯಗೊAಡ ರಜಿತ್ ಅವರು

(ಮೊದಲ ಪುಟದಿಂದ) ಸದರಿ ಎಂ.ಸಿ. ವರ್ಗಾವಣೆಗೆ ಪರಮೇಶ್, ಕಾಳಮ್ಮ ಕೃಷ್ಣಪ್ಪ ಅವರುಗಳು ನೀಡಿರುವ ದಾಖಲಾತಿಗಳನ್ನು ಕಂದಾಯ ಇಲಾಖೆಯಿಂದ ಪಡೆದು ಪರಿಶೀಲಿಸಿದ ಸಂದರ್ಭ, ಶಾಂತಳ್ಳಿ ಹೋಬಳಿಯ ತೋಳೂರುಶೆಟ್ಟಳ್ಳಿ ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ ಅವರ ಸಹಿತ ಇತರ ಮೂವರ ಕರಾಮತ್ತು ಬೆಳಕಿಗೆ ಬಂದಿದೆ.

ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ ಅವರು, ಸದರಿ ರುದ್ರಪ್ಪ ಹಾಗೂ ಪತ್ನಿ ಪಾರ್ವತಿ ಅವರುಗಳು ಬದುಕಿದ್ದಾಗಲೇ ಪೌತಿ ಎಂದು ನಮೂದಿಸಿದ್ದು, ಇವರ ಮಕ್ಕಳಾದ ಲೋಹಿತ್‌ಕುಮಾರ್, ರಜಿತ್ ಅವರುಗಳ ಬದಲಿಗೆ, ಕುಟುಂಬ ಸದಸ್ಯರಲ್ಲದಿದ್ದರೂ ರುದ್ರಪ್ಪ ಅವರ ಸಹೋದರಿ ಕಾಳಮ್ಮ, ಅವರ ಪತಿ ಕೃಷ್ಣಪ್ಪ ಹಾಗೂ ಮಗನಾದ ಡಿ.ಕೆ. ಪರಮೇಶ್ ಅವರ ಹೆಸರನ್ನು ನಮೂದಿಸಲಾಗಿದೆ.

ಇದರೊಂದಿಗೆ ರುದ್ರಪ್ಪ ಅವರ ಸಹೋದರ ಶಾಂತಪ್ಪ ಅವರು ವಿವಾಹಿತರಾಗಿದ್ದು, ನಾಲ್ವರು ಮಕ್ಕಳಿದ್ದರೂ ಸಹ ವಂಶವೃಕ್ಷದಲ್ಲಿ ಅವಿವಾಹಿತ ಎಂದು ತೋರಿಸಿ ಒಟ್ಟಾರೆ ಆಸ್ತಿಯ ಮೇಲೆ ಕೃಷ್ಣಪ್ಪ, ಕಾಳಮ್ಮ ಹಾಗೂ ಪರಮೇಶ್ ಅವರುಗಳು ಹಕ್ಕು ಸ್ಥಾಪಿಸಲು ಮುಂದಾಗಿದ್ದಾರೆ. ಇದರೊಂದಿಗೆ ಪೌತಿ ಖಾತೆಯೂ ಆಗಿದೆ. ಆರ್‌ಟಿಸಿಯಲ್ಲಿ ರುದ್ರಪ್ಪ ಅವರ ಹೆಸರನ್ನು ತೆಗೆಸಿ, ಮೂವರು ಸೇರ್ಪಡೆಗೊಂಡಿದ್ದಾರೆ.

ಈ ನಡುವೆ ರುದ್ರಪ್ಪ ಅವರು ೦೭.೦೧.೨೦೨೩ರಂದು ನಿಧನರಾಗಿದ್ದರೂ ೨೧.೦೪.೨೦೦೮ರಲ್ಲಿಯೇ ನಿಧನರಾ ಗಿರುವಂತೆ ಮರಣ ದೃಢೀಕರಣ ಪತ್ರ ನೀಡಲಾಗಿದೆ. ಇದರ ಸಂಖ್ಯೆ ೩/೨೦೦೮ ದಿನಾಂಕ ೨೮.೦೪.೨೦೦೮ ರಂತಿದೆ. ಇದರೊಂದಿಗೆ ರುದ್ರಪ್ಪ ಅವರ ಪತ್ನಿ ಪಾರ್ವತಿ ಅವರು ಈಗಲೂ ಜೀವಂತವಿದ್ದಾರೆ. ಆದರೆ ತಾ. ೧೩.೦೯.೨೦೦೬ರಂದೇ ಪೌತಿಯಾಗಿರುವಂತೆ ದೃಢೀಕರಿಸಿ ದ್ದಾರೆ. ಇದರ ಸಂಖ್ಯೆ ೭/೨೦೦೬ ದಿನಾಂಕ ೧೩.೦೯.೨೦೦೬ ಆಗಿದೆ. ಈ ದಾಖಲಾತಿ ಗಳಿಗೆ ನಕಲಿ ಸಹಿಗಳನ್ನು ಬಳಸಲಾಗಿದೆ.

ಅಲ್ಲದೇ ನಿಯಮ ೬೫ರಂತೆ ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ ಅವರು ಪೌತಿ ಖಾತೆ ಮಾಡಿ ಎಂ.ಆರ್.ಹೆಚ್. ೨೨/೨೦೧೬-೧೭ರಂತೆ ಎಂ.ಸಿ. ವರ್ಗಾವಣೆ ಮಾಡಿಸಿ ಆರ್‌ಟಿಸಿಯಲ್ಲಿ ಪರಮೇಶ, ಕಾಳಮ್ಮ, ಕೃಷ್ಣಪ್ಪ ಅವರ ಹೆಸರನ್ನು ೯ನೇ ಕಲಂನಲ್ಲಿ ಸೇರ್ಪಡೆ ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಯಾಗಿರುವ ನಾಗೇಂದ್ರ ಅವರು ಸದರಿ ರುದ್ರಪ್ಪ ಮತ್ತು ಪಾರ್ವತಿ ಅವರು ಬದುಕಿರುವುದು ತಿಳಿದಿದ್ದರೂ ಸಹ ಪೌತಿಯಾಗಿರುವಂತೆ ವಂಶವೃಕ್ಷ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ಕೆಲಸದಲ್ಲಿ ಇಂತಹ ನಿರ್ಲಕ್ಷö್ಯತನ ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಉದ್ಬವಿಸಿದೆ.

ಒಟ್ಟಾರೆ ಪ್ರಕರಣದ ಬಗ್ಗೆ ರಜಿತ್ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಕಲಿ ವಂಶವೃಕ್ಷ ಸೃಷ್ಟಿಸಿ, ಸುಳ್ಳು ಮರಣ ಪ್ರಮಾಣ ಪತ್ರ ತಯಾರಿಸಿ, ಫೋರ್ಜರಿ ಸಹಿಗಳನ್ನು ಮಾಡಿ ಮೋಸ ಮತ್ತು ವಂಚನೆಯ ಸಂಚು ರೂಪಿಸಿ ಜಾಗದ ದಾಖಲಾತಿಗಳನ್ನು ವರ್ಗಾವಣೆ ಮಾಡಿರುವ ಡಿ.ಕೆ. ಪರಮೇಶ, ಕಾಳಮ್ಮ, ಕೃಷ್ಣಪ್ಪ, ಗ್ರಾಮ ಲೆಕ್ಕಾಧಿಕಾರಿ ನಾಗೇಂದ್ರ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. - ವಿಜಯ್ ಹಾನಗಲ್