ಚೆಯ್ಯಂಡಾಣೆ, ಜು. ೧೯: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಡಗಿನಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸುವ ಚೆಯ್ಯಂಡಾಣೆ ಸಮೀಪದ ಚೇಲಾವರದಲ್ಲಿ ನೆಟ್‌ವರ್ಕ್ ಇಲ್ಲದೆ ಗ್ರಾಮಸ್ಥರು ಹಾಗೂ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.

ಇಂದಿನ ಡಿಜಿಟಲ್ ಯುಗದಲ್ಲೂ ಗ್ರಾಮಸ್ಥರನ್ನು ಹಾಗೂ ಪ್ರವಾಸಿಗರಿಗೆ ಅತಿಯಾಗಿ ಕಾಡುತ್ತಿರುವ ಸಮಸ್ಯೆ ಎಂದರೆ ದೂರವಾಣಿ ನೆಟ್‌ವರ್ಕ್ ಕೊರತೆ. ಒಂದು ಮಳೆ ಬಂದರೆ ಕನಿಷ್ಟ ಒಂದು ವಾರ ಈ ಗ್ರಾಮಕ್ಕೆ ವಿದ್ಯುತ್ ಇರುವುದಿಲ್ಲ. ನೆಟ್‌ವರ್ಕ್ ಸಹ ಕೈಕೊಡುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಚೇಲಾವರ ಗ್ರಾಮದಲ್ಲಿ ಯಾವುದೇ ಫೋನ್‌ಗಳಿಗೆ ನೆಟ್‌ವರ್ಕ್ ಸಂಪರ್ಕವಾಗುತ್ತಿಲ್ಲ. ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ಏನಾದರೂ ತೊಂದರೆ ಸಂಭವಿಸಿದರೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಗ್ರಾಮದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ, ಹಲವಾರು ಖಾಸಗಿ ರೆಸಾರ್ಟ್ಗಳು ಕಾರ್ಯಾಚರಿಸುತ್ತಿದ್ದು, ಎಲ್ಲರೂ ನೆಟ್‌ವರ್ಕ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಚೇಲಾವರ ಗ್ರಾಮವನ್ನು ನಿರ್ಲಕ್ಷಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು, ಮೊಬೈಲ್ ನೆಟ್‌ವರ್ಕ್ ಸಂಪರ್ಕ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

‘ಶಕ್ತಿ’ಯೊಂದಿಗೆ ಚೇಲಾವರದ ಗ್ರಾಮಸ್ಥ ಬಿಪಿನ್ ಪ್ರತಿಕ್ರಿಯಿಸಿ ತುರ್ತು ಸಂದರ್ಭದಲ್ಲಿ ಮಾಹಿತಿಗಳ ರವಾನೆಗಾಗಿ ಕರೆ ಮಾಡಲು ಇಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಹಲವಾರು ಖಾಸಗಿ ನೆಟ್‌ವರ್ಕ್ಗಳು ಇದ್ದರೂ ಸಹ ಇಲ್ಲಿ ಯಾವುದೇ ಟವರ್ ನಿರ್ಮಿಸಿಲ್ಲ ಬಿ.ಎಸ್.ಎನ್.ಎಲ್. ಕೆಲವು ಭಾಗಗಳಲ್ಲಿ ಸಿಗುತ್ತದೆ. ಆದರೆ ಮಳೆಗಾಲದಲ್ಲಿ ವಿದ್ಯುತ್ ಸರಿಯಾಗಿ ಇರದ ಕಾರಣ ಆ ನೆಟ್‌ವರ್ಕ್ ಕೂಡ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕಾದರೆ ಚೆಯ್ಯಂಡಾಣೆ ಪಟ್ಟಣವನ್ನು ಆಶ್ರಯಿಸಬೇಕಾಗಿದೆ. ಚೇಲಾವರ ಗ್ರಾಮಕ್ಕೆ ಸೂಕ್ತ ನೆಟ್‌ವರ್ಕ್ ಸ್ಥಾಪಿಸಿ ಗ್ರಾಮಸ್ಥರ ಹಾಗೂ ಪ್ರವಾಸಿಗರ ಭವಣೆ ನೀಗಿಸುವಂತೆ ಮನೆಯಪಂಡ ಧೀರಜ್ ತಿಮ್ಮಯ್ಯ ಒತ್ತಾಯಿಸಿದ್ದಾರೆ. -ಅಶ್ರಫ್