ಸೋಮವಾರಪೇಟೆ, ಜು. ೧೮: ಕನ್ನಡಿಗರ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದು ಕೊಳ್ಳಲಗತ್ಯವಾದ ಜನಜಾಗೃತಿ ಯನ್ನು, ಸಂಕಲ್ಪವನ್ನು ಹುಟ್ಟಿಸುವುದು ಕನ್ನಡ ಸಾಹಿತ್ಯ ಸಮ್ಮೇಳನಗಳ ಉದ್ದೇಶವಾಗಿದ್ದು, ಗೌಡಳ್ಳಿಯಲ್ಲಿ ನಡೆದ ತಾಲೂಕು ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಸಂತಸ ವ್ಯಕ್ತಪಡಿಸಿದರು.

ಫೆ. ೧೧ರಂದು ಗೌಡಳ್ಳಿಯ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ, ಶ್ರೀ ನವದುರ್ಗಾ ಪರಮೇಶ್ವರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನೆ ಮತ್ತು ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದ ಸಾವಿರಾರು ಮಂದಿ ಕನ್ನಡ ಮನಸ್ಸುಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಅನೇಕ ಸಾಧಕರನ್ನು ಸನ್ಮಾನಿಸ ಲಾಯಿತು. ಸಮ್ಮೇಳನದ ಮೂಲಕ ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ವಿಶೇಷತೆಗಳು ಇಡೀ ಜಿಲ್ಲೆಗೆ ಪಸರಿಸು ವಂತಾಯಿತು.

ಯುವ ಪೀಳಿಗೆಗೆ ಕನ್ನಡ ಭಾಷಾ ಬೆಳವಣಿಗೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಮುಂದಿನ ಪೀಳಿಗೆಯೂ ಕನ್ನಡ ಸಂಸ್ಕೃತಿಯ ತೇರನ್ನು ಎಳೆಯಬೇಕು. ಅದಕ್ಕಾಗಿ ಸೂಕ್ತ ತಿಳುವಳಿಕೆಯನ್ನು ಹಿರಿಯರು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮ್ಮೇಳನಾಧ್ಯಕ್ಷೆ ಶ.ಗ. ನಯನತಾರ ಮಾತನಾಡಿ, ಕನ್ನಡ ಭಾಷೆ ಶ್ರೀಮಂತವಾಗಿರುವುದು ಗ್ರಾಮೀಣ ಭಾಗದಲ್ಲಿ. ಮನೆಯ ಹಬ್ಬದಂತೆ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡ ಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ. ಪ್ರತಿಯೊಂದು ವ್ಯವಸ್ಥೆಯೂ ಅಚ್ಚುಕಟ್ಟಾಗಿತ್ತು ಎಂದು ಸಂತೃಪ್ತಿ ವ್ಯಕ್ತಪಡಿಸಿದರು. ಹಣಕಾಸು ಸಮಿತಿ ಅಧ್ಯಕ್ಷ ಪಿ.ಕೆ. ರವಿ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭ ಸಮ್ಮೇಳನ ಯಶಸ್ವಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದ ಗೌಡಳ್ಳಿ ವೀರಭದ್ರಪ್ಪ, ಸಮ್ಮೇಳನ ಕಾರ್ಯದರ್ಶಿ ನಾಗರಾಜ್, ಕ.ಸಾ.ಪ. ತಾಲೂಕು ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ಅವರನ್ನು ಸನ್ಮಾನಿಸ ಲಾಯಿತು. ಯಶಸ್ವಿಗೆ ಶ್ರಮಿಸಿದ ವಿವಿಧ ಉಪ ಸಮಿತಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸ ಲಾಯಿತು. ಸಮ್ಮೇಳನದ ಉಳಿಕೆ ಹಣದಲ್ಲಿ ಶ್ರೀಮಳೆಮಲ್ಲೇಶ್ವರ ದೇವಾಲಯ ಹಾಗೂ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯಕ್ಕೆ ತಲಾ ಹದಿನೈದು ಸಾವಿರ ರೂಪಾಯಿಗಳ ಸಹಾಯಧನ ನೀಡಲಾಯಿತು.

ವೇದಿಕೆಯಲ್ಲಿ ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ಜಿಲ್ಲಾ ಕ.ಸಾ.ಪ. ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಅಹಮ್ಮದ್, ರೇವತಿ ರಮೇಶ್, ಆಹಾರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ, ಪ್ರಮುಖರಾದ ಹೆಚ್.ಜೆ. ಜವರಪ್ಪ, ಎ.ಪಿ. ವೀರರಾಜು, ಹೆಚ್.ಆರ್. ಮುತ್ತಣ್ಣ, ಕೆ.ಪಿ. ದಿನೇಶ್ ಇದ್ದರು.