ಸೋಮವಾರಪೇಟೆ, ಜು. ೧೮: ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆ ನಡೆದಿದ್ದು, ಕಂದಾಯ ಇಲಾಖೆಗೆ ಸಂಬAಧಿಸಿದ ದೂರುಗಳೇ ಅಧಿಕವಾಗಿ ಸಲ್ಲಿಕೆಯಾದವು.
ಲೋಕಾಯುಕ್ತ ಡಿವೈಎಸ್‌ಪಿ ಪವನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ದೂರು ನೀಡಿದರು.
ದೊಡ್ಡ ಬಿಳಹ ಗ್ರಾಮದ ಬಿ.ಎಂ. ಪ್ರಕಾಶ್ ಅವರು, ತನಗೆ ಸೇರಿದ ಕೃಷಿ ಭೂಮಿಯನ್ನು ನಕಲಿ ಸಹಿ ಬಳಸಿ ಬೇರೆಯವರಿಗೆ ನೀಡಲಾಗಿದೆ. ಇದರಿಂದಾಗಿ ನನಗೆ ಸಮಸ್ಯೆಯಾಗಿದೆ ಎಂದರು. ಜಾಗ ವರ್ಗಾಯಿಸಿಕೊಂಡವರು ಹಾಗೂ ಅದನ್ನು ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕೂಡಲೇ ಸಂಬAಧಿಸಿದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಿಸುವಂತೆ ತಿಳಿಸಿದರಲ್ಲದೆ, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರೊಂದಿಗೆ ಮಾತುಕತೆ ನಡೆಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ತಾಕೇರಿ ಗ್ರಾಮದ ಎಂ.ಪಿ. ದೇವಯ್ಯ ಅವರು ೨೦೧೮ರ ಮಹಾಮಳೆಯಲ್ಲಿ ವಾಸದ ಮನೆ ಕುಸಿದಿದ್ದು, ಈ ಬಗ್ಗೆ ಕಂದಾಯ ಇಲಾಖೆಗೆ ದೂರು ನೀಡಿದ್ದರೂ ಇಂದಿಗೂ ಮನೆ ನಿರ್ಮಿಸಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳಿಗೆ ಕೂಡಲೇ ಮನೆ ನಿರ್ಮಿಸಲು ಅನುಕೂಲ ಮಾಡಿಕೊಡಬೇಕೆಂದು ಲೋಕಾಯುಕ್ತ ಡಿವೈಎಸ್‌ಪಿ ಮೌಖಿಕವಾಗಿ ತಿಳಿಸಿದರು.
ನಾಕೂರು ಶಿರಂಗಾಲ ಗ್ರಾಮದ ಬಿ.ಎಸ್. ತಿಮ್ಮಪ್ಪ ರೈ, ತನ್ನ ಸ್ವಂತ ಜಾಗ ಮಾರಾಟ ಮಾಡಲು ನಿರಾಕ್ಷೇಪಣಾ ಪತ್ರ ಕೋರಿ ಸಾಕಷ್ಟು ಸಮಯವಾದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಬೆಂಬಳೂರು ಗ್ರಾಮದ ಬಿ.ಕೆ. ಚಂದ್ರಶೇಖರ್, ತಮ್ಮ ಕೃಷಿ ಭೂಮಿಯ ಸಾಗುವಳಿ ಚೀಟಿ ನೀಡುವಂತೆ ಅರ್ಜಿ ಸಲ್ಲಿಸಿದರೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರು ನೀಡಿದರು. ಕಲ್ಕಂದೂರು ಗ್ರಾಮದ ಎನ್.ಎ. ಗಣಪತಿ, ತನಗೆ ಸೇರಿದ ಕೃಷಿ ಭೂಮಿಯನ್ನು ಕಂದಾಯ ಇಲಾಖೆ ಪೈಸಾರಿ ಎಂದು ಮಾಡಿದ್ದು, ಇದರಿಂದ ನನಗೆ ಸರ್ಕಾರದಿಂದ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿಕೊಂಡರು.
ಕಿರಿಕೊಡ್ಲಿ ಗ್ರಾಮದ ಡಿ.ಆರ್. ರಂಜನ್, ತಹಶೀಲ್ದಾರ್ ನ್ಯಾಯಾಲಯದಲ್ಲಿ ಕೃಷಿ ಭೂಮಿಗೆ ಸಂಬAಧಿಸಿದAತೆ ತಕರಾರು ಅರ್ಜಿ ಸಲ್ಲಿಸಿದ್ದು, ಉಭಯಸ್ಥರ ಸ್ವಾಧೀನಾನುಭವದಂತೆ ಸರ್ವೆ ಕಾರ್ಯ ನಡೆಸಿ, ಅದಕ್ಕನುಗುಣವಾಗಿ ಖಾತೆ ವರ್ಗಾಯಿಸಲು ಕ್ರಮ ವಹಿಸುವಂತೆ ಆದೇಶಿಸಿದ್ದು, ಇನ್ನೂ ಕ್ರಮ ವಹಿಸಿಲ್ಲ. ಕೂಡಲೇ ಸೂಕ್ತ ಕ್ರಮ ವಹಿಸಬೇಕೆಂದು ದೂರು ನೀಡಿದರು.
ಸಭೆಯಲ್ಲಿ ತಹಶೀಲ್ದಾರ್ ಎಸ್.ಎನ್. ನರಗುಂದ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಲೋಕಾಯುಕ್ತ ಇಲಾಖೆಯ ಮುಖ್ಯ ಪೇದೆ ಟಿ.ಎಂ. ಮಂಜುನಾಥ್ ಮತ್ತು ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.