ಸಿದ್ದಾಪುರ, ಜು. ೧೮: ಕಾಡಿಗೆ ಅಟ್ಟಿದ್ದ ಕಾಡಾನೆಗಳು ಮರಳಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶಗೊಳಿಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಾ.೧೭ರಂದು ಅಮ್ಮತ್ತಿ ವ್ಯಾಪ್ತಿಯ ಇಂಜಿಲೆಗೆರೆ, ಪುಲಿ ಯೇರಿ, ಗುಹ್ಯ, ಕಣ್ಣಂಗಾಲ ಗ್ರಾಮ ಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ನಡೆಸಿದ್ದರು. ೨೫ಕ್ಕೂ ಅಧಿಕ ಕಾಡಾನೆಗಳು ಪತ್ತೆ ಆಗಿದ್ದವು. ಕಾಡಾನೆಗಳ ಹಿಂಡುಗಳು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದು ಕಾಡಿಗೆ ತೆರಳದಂತೆ ಕಾಫಿ ತೋಟಗಳಲ್ಲಿ ಉಳಿದುಕೊಂಡಿದ್ದವು.
ಇದೀಗ ಕಾಡಿಗೆ ತೆರಳಿದ ಕಾಡಾನೆಗಳು ಹಿಂತಿರುಗಿ ರಾತ್ರಿ ಸಮಯದಲ್ಲಿ ಇಂಜಿಲೆಗೆರೆ, ಪುಲಿಯೇರಿ ಗ್ರಾಮಗಳ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದರಿಂದಾಗಿ ಕಾರ್ಮಿಕರಿಗೆ ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಭಯದ ವಾತಾವರಣ ಮೂಡಿದೆ. ಗುಹ್ಯ ಗ್ರಾಮದ ಸರ್ಕಾರಿ ಶಾಲೆಯ ಸಮೀಪದ ಸುತ್ತಮುತ್ತಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ರಾಜ ರೋಷವಾಗಿ ಸುತ್ತಾ ಡುತ್ತಿವೆ. ಕಾಫಿ ತೋಟಗಳ ಬಳಿ ಇರುವ ಸೋಲಾರ್ ಬೇಲಿಗಳನ್ನು ಕೂಡ ಲೆಕ್ಕಿಸದೆ ಕಾಫಿ ತೋಟಗಳಲ್ಲಿ ಆನೆಗಳು ಸುತ್ತಾಡುತ್ತಿದೆ. ಗ್ರಾಮಗಳ ನಿವಾಸಿಗಳಿಗೆ ಸಂಜೆ ಮನೆಯಿಂದ ಹೊರಕ್ಕೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಆತಂಕ ಸೃಷ್ಟಿಸಿದೆ ಮಿತಿಮೀರಿದ ಕಾಡಾನೆಗಳ ಹಾವಳಿಯಿಂದಾಗಿ ಗ್ರಾಮಸ್ಥರಿಗೆ, ಬೆಳೆಗಾರರಿಗೆ, ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. -ವಾಸು