ಮಡಿಕೇರಿ, ಜು. ೧೮: ಕೊಡಗು ಜಿಲ್ಲೆಯ ಹಲವು ಗ್ರಾಮಗಳು ಹಾಗೂ ತೋಟಗಳು ಅರಣ್ಯದಂಚಿನಲ್ಲಿ ನೆಲೆನಿಂತಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಕಾಡಾನೆ ಹಾಗೂ ಮಾನವ ಸಂಘರ್ಷ ನಡೆಯುತ್ತಲೇ ಇದ್ದು, ಕಾಡಾನೆಗಳ ದಾಳಿಯಿಂದ ಪ್ರಾಣಹಾನಿ ಸಂಭವಿಸುತ್ತಲೇ ಇದೆ. ಕೊಡಗು ಜಿಲ್ಲೆಯ ಕಾಫಿ ತೋಟಗಳು ಕಾಡಾನೆಗಳ ಆವಾಸಸ್ಥಾನವಾಗಿ ಮಾರ್ಪಾಡುಗೊಂಡಿದೆ.

ಕಾಡಿನಿAದ ನಾಡಿಗೆ ಆಹಾರ ಅರಸಿ ಬರುತ್ತಿರುವ ಕಾಡಾನೆಗಳು, ತೋಟದಲ್ಲೇ ಬೀಡುಬಿಡುತ್ತಿವೆ. ತೋಟದಲ್ಲಿ ಆನೆಗಳಿಗೆ ಬೇಕಾದ ಆಹಾರ ಸಿಗುತ್ತಿರುವುದರಿಂದ, ಕಾಡಾನೆಗಳು ತೋಟವನ್ನೇ ತಮ್ಮ ವಾಸಸ್ಥಳವಾಗಿ ಮಾಡಿಕೊಂಡಿದೆ. ಕಾಡಾನೆಗಳು ತೋಟದಲ್ಲಿ ಬೆಳೆದು, ತಮ್ಮ ಮರಿಗಳಿಗೆ ಅಲ್ಲಿಯೇ ಜನ್ಮನೀಡುತ್ತಿವೆ. ಮರಿಗಳು ಹುಟ್ಟಿನಿಂದಲೇ ತೋಟದಲ್ಲೇ ಬೆಳೆಯುತ್ತಿದೆ. ತೋಟದಲ್ಲಿ ಹುಟ್ಟಿ ಬೆಳೆದ ಕಾಡಾನೆಗಳಿಗೆ ಕಾಡಿನ ಬಗ್ಗೆ ಅರಿವಿಲ್ಲ. ತೋಟವನ್ನೇ ತಮ್ಮ ಅರಣ್ಯಮಾಡಿಕೊಂಡಿದೆ.

ಕಾಫಿ ತೋಟದಲ್ಲಿ ಸಿಗುವ ಆಹಾರವನ್ನು ಸೇವಿಸುತ್ತಾ ಬದುಕು ಸಾಗಿಸುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾಗೂ ತೋಟದ ಆನೆಗಳು ಯಾವುದೆಂದು ಗುರುತಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಕಾಡಿನಿಂದ ಕಾಫಿ ತೋಟಗಳಿಗೆ ಆಹಾರ ಅರಸಿ ಬಂದು,ಕಾಡಾನೆಗಳು ತಮ್ಮ ಮರಿಗಳಿಗೆ ತೋಟದಲ್ಲಿ ಜನ್ಮ ನೀಡಿ ತೋಟದಲ್ಲೇ ಬೆಳೆದ ಆನೆಗಳಿಂದಲೇ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಾಣಹಾನಿ ಹಾಗೂ ಬೆಳೆ ಹಾನಿಯಾಗಿದೆ ಎಂಬುದು ನಂಬಲೇ ಬೇಕಾದ ಕಟು ಸತ್ಯ. ಇದರಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರು ಹೈರಾಣಾಗಿದ್ದಾರೆ.

ತೋಟಾನೆಗಳು ಆಹಾರವನ್ನು ಅರಸಿ ತಾನು ಹುಟ್ಟಿ ಬೆಳೆದ ತೋಟದಿಂದ, ಪಕ್ಕದಲ್ಲೇ ಇರುವ ತೋಟಗಳಿಗೆ ಆಹಾರವನ್ನು ಅರಸಿ ವಲಸೆ ಬಂದು ದಾಂಧಲೆ ನಡೆಸುತ್ತಿವೆ. ಈ ಮಧ್ಯೆ ಸಿಗುವ ಕಾರ್ಮಿಕರು ಹಾಗೂ ಬೆಳೆಗಾರರ ಮೇಲೆ ದಾಳಿ ನಡೆಸಿ, ಪ್ರಾಣ ಹಾನಿ ಮಾಡುತ್ತಿವೆ. ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಹೆಚ್ಚಿನ ಮಂದಿ ಕೂಲಿ ಕಾರ್ಮಿಕರೇ ಮೃತಪಟ್ಟಿದ್ದಾರೆ. ಕೂಲಿ ಮಾಡದಿದ್ದರೆ ಒಪ್ಪೊತ್ತಿನ ಊಟಕ್ಕೆ ಸಂಕಷ್ಟ ಪಡಬೇಕು, ಮತ್ತೊಂದೆಡೆ ಕೂಲಿ ಮಾಡಲು ತೋಟಕ್ಕೆ ತೆರಳಿದರೆ ಆನೆಗಳ ಭಯದಿಂದಲೇ ಕೆಲಸ ಮಾಡಬೇಕು ಎಂಬ ಪರಿಸ್ಥಿತಿ ಜಿಲ್ಲೆಯ ತೋಟ ಕಾರ್ಮಿಕರದ್ದು. ಮೊದಲು ದಕ್ಷಿಣ ಕೊಡಗಿನ ಹಾಗೂ ಸೋಮವಾರಪೇಟೆ ಭಾಗದ ಕೆಲ ಭಾಗದಲ್ಲಿ ಮಾತ್ರ ಕಂಡು ಬರುತ್ತಿದ್ದ ಕಾಡಾನೆಗಳ ಹಾವಳಿ ಇದೀಗ ಜಿಲ್ಲೆಯ ಉದ್ದಗಲಕ್ಕೂ ವ್ಯಾಪಿಸಿದೆ. ಕಾಡಾನೆಗಳ ಹಾವಳಿ ಇಲ್ಲದ ಯಾವುದೇ ಗ್ರಾಮಗಳು ಜಿಲ್ಲೆಯಲ್ಲಿ ಇಲ್ಲ ಎಂಬ ಸ್ಥಿತಿ ಕೊಡಗಿನಲ್ಲಿ ನಿರ್ಮಾಣವಾಗಿದೆ.

ಲೆಕ್ಕಕ್ಕೆ ಸಿಗದ ತೋಟದ ಆನೆಗಳು!

ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಅರಣ್ಯ ಪ್ರದೇಶಗಳೂ ಒತ್ತುವರಿಯಾಗಿವೆ. ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಇತ್ತೀಚಿಗೆ ಕಾಡಾನೆಗಳ ಸರ್ವೆ ಕಾರ್ಯ ನಡೆದಿತ್ತು. ಆದರೆ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಬಗ್ಗೆ ಸರ್ವೆ ಕಾರ್ಯ ನಡೆದಿಲ್ಲ. ತಾತ್ಕಾಲಿಕವಾಗಿ ಮಾಹಿತಿ ಇರುವ ಕಾಡಾನೆಗಳನ್ನು ತೋಟದಿಂದ ಕಾಡಿಗಟ್ಟಿದರೆ, ಅದೇ ಆನೆಗಳು ತೋಟದಲ್ಲೇ ಹುಟ್ಟಿ ಬೆಳೆದ ಕಾಡಾನೆಗಳು ಆಗಿದ್ದರೆ ಮತ್ತೆ ಆ ಕಾಡಾನೆಗಳು ತೋಟಕ್ಕೆ ಮರಳಿ ಬರುತ್ತಿದೆ.

ಕಾಡಾನೆಗಳು ತಮಗಿರುವ ವಾಸನೆಯ ಗ್ರಹಿಕೆ ಶಕ್ತಿಯಿಂದ ಮತ್ತೆ ತೋಟಗಳಿಗೆ ಮರಳಿ ಬರುತ್ತವೆ. ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಬಗ್ಗೆ ತೋಟದ ಮಾಲೀಕರಿಗೆ ಮಾಹಿತಿ ಇಲ್ಲ. ಕೆಲವೊಂದು ಭಾಗಗಳಲ್ಲಿ ಆನೆಗಳ ಭಯದಿಂದ ತೋಟದತ್ತ ಮುಖಮಾಡುವುದನ್ನೇ ತೋಟದ ಮಾಲೀಕರು ನಿಲ್ಲಿಸಿದ್ದಾರೆ. ಕಾಡಿನಿಂದ ನಾಡಿಗೆ ಆಹಾರ ಹುಡುಕಿ ಬಂದ ಕಾಡಾನೆಗಳಿಗೆ ಕಾಫಿ ತೋಟದಲ್ಲಿ ಹಲಸು, ಬಿದಿರು, ತೆಂಗು, ಬಾಳೆ ಹಾಗೂ ಕುಡಿಯಲು ನೀರು ಸಿಗುತ್ತಿರುವುದರಿಂದ ಕಾಡಾನೆಗಳು ತೋಟದಲ್ಲೇ ಆಶ್ರಯ ಪಡೆದಿವೆ. ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರ ಸಿಗುತ್ತಿಲ್ಲ. ತನ್ನ ಹಸಿವು ನೀಗಿಸಲು ಆನೆಗಳು ತೋಟವನ್ನೇ ತನ್ನ ಅರಣ್ಯವನ್ನಾಗಿ ಮಾರ್ಪಾಡು ಮಾಡಿದ್ದು, ಕೊಡಗಿನ ಕಾಫಿ ತೋಟಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಕಾಡಾನೆಗಳು ಜನ್ಮ ತಾಳಿ ತೋಟದಲ್ಲಿ ನೆಲೆಸಿವೆ.

ಕಾಫಿ ತೋಟಗಳೇ ಕಾಡಾನೆಗಳ ಹೆರಿಗೆ ಆಸ್ಪತ್ರೆ!

ಕೊಡಗಿನ ಬೆರಳೆಣಿಕೆಯಷ್ಟು ತೋಟಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಕಾಡಾನೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹೆಸರಿಗೆ ಒಂದೆರಡು ಕಾಡಾನೆಗಳನ್ನು ಸೆರೆ ಹಿಡಿದು, ಆನೆ ಶಿಬಿರ ಕೇಂದ್ರಗಳಿಗೆ ಸೇರಿಸಲಾಗುತ್ತಿದೆ. ಹಲವಾರು ಬಾರಿ ತೋಟದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಹಲವು ಆನೆ ಮರಿಗಳು ಕೂಡ ಪತ್ತೆಯಾಗಿತ್ತು. ಕಾಡಿನಲ್ಲೇ ಹುಟ್ಟಿ ಬೆಳೆಯ ಬೇಕಿದ್ದ ಕಾಡಾನೆಗಳು ತೋಟವನ್ನು ತನ್ನ ಹೆರಿಗೆ ಆಸ್ಪತ್ರೆಯನ್ನಾಗಿ ಮಾಡಿ, ತೋಟಾನೆಯಾಗಿ ಜೀವನ ನಡೆಸುತ್ತಿದೆ.

ರಾಜ್ಯದಲ್ಲಿ ಕೊಡಗಿನಲ್ಲಿ ಅತೀ ಹೆಚ್ಚಾಗಿ ಕಾಡುತ್ತಿರುವ ಕಾಡಾನೆ-ಮಾನವ ಸಂಘರ್ಷ!

ರಾಜ್ಯದಲ್ಲಿ ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು ಜಿಲ್ಲೆಯ ಕೆಲ ಭಾಗಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ಅತೀ ಹೆಚ್ಚಾಗಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಇದರಲ್ಲಿ ಅತೀ ಹೆಚ್ಚು ಕೊಡಗು ಜಿಲ್ಲೆಯಲ್ಲಿಯೇ ಕಾಡಾನೆಗಳು ಹಾಗೂ ಮಾನವ ಸಂಘರ್ಷ ನಡೆಯುತ್ತಿದೆ. ಮಾಲ್ದಾರೆ, ಚೆನ್ನಯ್ಯನಕೋಟೆ, ಸಿದ್ದಾಪುರ, ಪಾಲಿಬೆಟ್ಟ ಅಮ್ಮತ್ತಿ-ಕಾರ್ಮಾಡು, ಕಕ್ಕಬ್ಬೆ-ಕುಂಜಿಲ, ನರಿಯಂದಡ, ಕುಟ್ಟ, ಶ್ರೀಮಂಗಲ, ನಿಟ್ಟೂರು-ಕಾರ್ಮಾಡು, ಬಾಳೆಲೆ ಈ ಭಾಗದ ತೋಟಗಳಲ್ಲಿ ಅತೀ ಹೆಚ್ಚಾಗಿ ಕಾಡಾನೆಗಳು ಬೀಡುಬಿಟ್ಟಿದೆ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವು ಹಾಗೂ ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು, ಕೂಡ್ಲೂರು-ಚೆಟ್ಟಳ್ಳಿ, ಅಭ್ಯತ್‌ಮಂಗಲ, ನಂಜರಾಯಪಟ್ಟಣ ಭಾಗದಲ್ಲಿರುವ ತೋಟದಲ್ಲಿ ಆನೆಗಳ ಚಲನವಲನ ಹೆಚ್ಚಾಗಿ ಕಂಡುಬAದಿದೆ. - ಕೆ.ಎಂ ಇಸ್ಮಾಯಿಲ್ ಕಂಡಕರೆ