ಸಿದ್ದಾಪುರ, ಜು. ೧೭: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಸಮೀಪದ ಕಣ್ಣಂಗಾಲ, ಪುಲಿಯೇರಿ, ಇಂಜಿಲಗೆರೆ, ಗುಹ್ಯ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭ ಕಾಫಿ ತೋಟದಲ್ಲಿದ್ದ ಕಾಡಾನೆಗಳು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದೆ. ಕೂಡಲೇ ಅಪಾಯವನ್ನು ಅರಿತ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ತೋಟದೊಳಗೆ ಓಡಿಹೋಗಿ ಅಪಾಯದಿಂದ ಪಾರಾದರು. ಕಣ್ಣಂಗಾಲ, ಪುಲಿಯೇರಿ ಗುಹ್ಯ, ಸಿದ್ದಾಪುರ ಭಾಗದಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿ ಇದ್ದು, ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದೆ. ಅಲ್ಲದೇ ಕೃಷಿ ಫಸಲುಗಳನ್ನು ನಾಶಗೊಳಿಸುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಹಾಗೂ ಬೆಳೆಗಾರರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಹಮ್ಮಿಕೊಂಡಿರುವುದಾಗಿ ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಕಾಡಾನೆಗಳ ಎರಡು ಗುಂಪುಗಳು ಪತ್ತೆ ಆಗಿದ್ದು, ಒಂದು ಗುಂಪಿನಲ್ಲಿ ೧೧ ಕಾಡಾನೆಗಳು ಮತ್ತೊಂದು ಗುಂಪಿನಲ್ಲಿ ೧೬ ಕಾಡಾನೆಗಳು ಪತ್ತೆಯಾಗಿರುವುದಾಗಿ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಮಾಹಿತಿ ನೀಡಿದರು.
೨೫ಕ್ಕೂ ಅಧಿಕ ಕಾಡಾನೆಗಳ ಹಿಂಡು ಇದ್ದು, ಮರಿಯಾನೆಗಳು ಹಾಗೂ ಸಲಗಗಳು ಕಂಡು ಬಂದಿರುತ್ತದೆ.
ಸಂಜೆಯವರೆಗೆ ಕಾಡಾನೆಗಳ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಿದರೂ ಕೂಡ ಒಂದು ಗುಂಪಿನ ಕಾಡಾನೆಗಳು ತೋಟದೊಳಗಿನಿಂದ ಹೊರ ಹೋಗದೇ ಉಳಿದಿದ್ದವು. ಕೆಲವು ಕಾಡಾನೆಗಳನ್ನು ಸಮೀಪದ ಕಾಡಿಗೆ ಅಟ್ಟಲಾಯಿತು. ಆಹಾರ ಅರಿಸಿಕೊಂಡು ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ಕಾಫಿ ತೋಟಗಳಲ್ಲೇ ಕೆಲವು ಆನೆಗಳು ಮರಿ ಹಾಕುತ್ತಿದ್ದು, ಇಂತಹ ಆನೆಗಳು ತೋಟ ಬಿಟ್ಟು ಕದಲುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಿದ್ದಾಪುರ, ಇಂಜಿಲಗೆರೆ, ಕಣ್ಣಂಗಾಲ ಭಾಗದಲ್ಲಿ ಕಾಡಾನೆಗಳ ಸಂಖ್ಯೆ ಮಿತಿ ಮೀರಿದ್ದು, ಕಾರ್ಮಿಕರು ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಲು ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಿಂದ ಗುಹ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಒಂಟಿ ಸಲಗವೊಂದು ಸುತ್ತಾಡುತ್ತಿದ್ದು, ಮಕ್ಕಳು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವೀರಾಜಪೇಟೆಯ ಡಿಸಿಎಫ್ ಶರಣಬಸಪ್ಪ, ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ದೇಯಂಡ ಸಂಜೀತ್ ಸೋಮಯ್ಯ ಹಾಗೂ ಸಿಬ್ಬಂದಿಗಳು ಆರ್.ಆರ್.ಟಿ. ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಾಸು ಎ.ಎನ್.