ಪೊನ್ನಂಪೇಟೆ, ಜು. ೧೬: ಪೊನ್ನಂಪೇಟೆ ತಾಲೂಕಿನ ಕಿರುಗೂರು ಹಾಗೂ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಗಳಲ್ಲಿ ಕಾಡು ಹಂದಿಗಳ ಹಾವಳಿ ಪ್ರಾರಂಭವಾಗಿದ್ದು, ಭತ್ತದ ಗದ್ದೆಗಳಲ್ಲಿ ಸಿದ್ದಪಡಿಸಿದ್ದ ಭತ್ತದ ಸಸಿ ಮಡಿಗಳನ್ನು ಕಾಡುಹಂದಿಗಳ ಹಿಂಡು ಸಂಪೂರ್ಣವಾಗಿ ಧ್ವಂಸ ಮಾಡಿವೆ.
ಹೆಚ್.ಆರ್.ಹರೀಶ್, ಆಲೆಮಾಡ ಪಿ.ಕಾವೇರಮ್ಮ, ರಾಜು, ಡಿಕ್ಕಿ ತಮ್ಮಯ್ಯ, ಹೆಚ್.ಎಂ. ಸ್ವಾಮಿ ಎಂಬವರ ಭತ್ತದ ಸಸಿ ಮಡಿಗಳಿದ್ದ ಗದ್ದೆಗೆ ಕಾಡು ಹಂದಿಗಳು ದಾಳಿ ನಡೆಸಿವೆ. ಪರಿಣಾಮ ಸುಮಾರು ೧೬ರಿಂದ ೨೦ ಕ್ವಿಂಟಾಲ್ ನಷ್ಟು ಬಿತ್ತನೆ ಮಾಡಿದ್ದ ಭತ್ತದ ಬೀಜ ಹಾನಿಗೊಳಗಾಗಿದೆ.
ಅಲ್ಲದೇ ಕಿರುಗೂರು ಗ್ರಾಮದ ಪಿ.ಆರ್.ಮುಕುಂದ ಎಂಬವರ ಕಾಫಿ ತೋಟಕ್ಕೆ ನುಗ್ಗಿದ ಕಾಡುಹಂದಿಗಳ ಹಿಂಡು ನೂರಾರು ಕಾಳು ಮೆಣಸು ಬಳ್ಳಿಗಳನ್ನು ನಾಶಪಡಿಸಿದೆ. ಫಸಲಿಗೆ ಬಂದ ಕಾಳು ಮೆಣಸಿನ ಬಳ್ಳಿಯಾಗಿರುವ ಕಾರಣ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಮತ್ತೆ ಕಾಳು ಮೆಣಸು ಬಳ್ಳಿ ಬೆಳೆಸಲು ಕೆಲವು ವರ್ಷಗಳು ಬೇಕಾಗಿದ್ದು, ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಮುಕುಂದ ಅವರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ತಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ, ಪ್ರಮುಖರಾದ ತೀತರಮಾಡ ರಾಜ ಕರುಂಬಯ್ಯ, ಆಲೆಮಾಡ ಕಾರ್ತಿಕ್, ಮಾಯಮುಡಿ ಗ್ರಾಮದ ರೈತ ಸಂಘದ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ಕಾಳಪಂಡ ಗಣೇಶ್, ಆಪಟ್ಟೀರ ದೇವಯ್ಯ, ಬಾನಂಡ ರಾಜು ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊನ್ನಂಪೇಟೆ ಉಪವಲಯ ಅರಣ್ಯ ಅಧಿಕಾರಿ ದಿವಾಕರ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರೈತರು ಮತ್ತು ಬೆಳೆಗಾರರು ತಮಗಾದ ನಷ್ಟದ ಕುರಿತು ಅಳಲು ತೋಡಿಕೊಂಡರು. ಪೊನ್ನಂಪೇಟೆ ಉಪವಲಯ ಅರಣ್ಯ ಅಧಿಕಾರಿ ದಿವಾಕರ್ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಪರಿಹಾರ ತಂತ್ರಾAಶದ ಆ್ಯಪ್ ಇದ್ದು, ಅದರಲ್ಲಿ ಘಟನಾ ಸ್ಥಳದ ಮಾಹಿತಿ ನೀಡಿ ತಕ್ಷಣವೇ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ.
ಕಾಡುಹಂದಿಗಳು ಭತ್ತದ ಸಸಿ ಮಡಿಗಳನ್ನು ನಾಶಪಡಿಸಿರುವುದು ಕಂಡುಬAದಿದ್ದು, ಕಾಡುಹಂದಿಗಳ ಉಪಟಳ ತಡೆಯಲು ಸಿಬ್ಬಂದಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು. ಕಾಡುಹಂದಿಗಳ ಕಾಟದಿಂದ ನಷ್ಟಕ್ಕೊಳಗಾದ ರೈತರಿಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸ ಲಾಗುವುದೆಂದು ಭರವಸೆ ನೀಡಿದರು.