ಸೋಮವಾರಪೇಟೆ, ಜು. ೧೫: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರನ್ನು ಭೇಟಿ ಮಾಡಲು ಸೋಮವಾರಪೇಟೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಬೆಳಿಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಸೋಮವಾರಪೇಟೆಯಲ್ಲಿರುವ ಕಚೇರಿಯಲ್ಲಿ ಶಾಸಕರು ಲಭ್ಯವಿರುವ ದಿನಗಳಂದು ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು.

ಗ್ರಾಮೀಣ ಭಾಗದಿಂದ, ದೂರದ ಊರುಗಳಿಂದ ಅಹವಾಲು ಸಲ್ಲಿಸಲು ಆಗಮಿಸುವ ಸಾರ್ವಜನಿಕರು ಬೆಳಿಗ್ಗೆ ಬೇಗನೇ ಮನೆಯಿಂದ ಹೊರಡುವುದರಿಂದ ತಮ್ಮ ಮನೆಯಲ್ಲಿ ಉಪಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಕಚೇರಿಗೆ ಆಗಮಿಸಿ ಭೇಟಿಗಾಗಿ ಕಾಯುತ್ತಾ ಕೆಲವರು ಉಪಹಾರವನ್ನೇ ಮಾಡುವುದಿಲ್ಲ. ಈ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲ ವಾಗಲೆಂದು ಕಚೇರಿಯಲ್ಲಿಯೇ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ತಾನು ಲಭ್ಯವಿರುವ ದಿನಗಳಲ್ಲಿ ಭೇಟಿಗಾಗಿ ಆಗಮಿಸುವ ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ ಎಂದು ಶಾಸಕ ಮಂಥರ್ ಗೌಡ ತಿಳಿಸಿದ್ದಾರೆ.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ಕಾರ್ಯದರ್ಶಿ ವಿ.ಎ. ಲಾರೆನ್ಸ್, ಪ್ರಮುಖರಾದ ಶಾಂತವೇರಿ ವಸಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.