ವರದಿ : ಚಂದ್ರಮೋಹನ್

ಕುಶಾಲನಗರ, ಜು. ೧೪ : ಕಾಡಾನೆಗಳ ಹಾವಳಿಯಿಂದ ಕೃಷಿ ಫಸಲನ್ನು ರಕ್ಷಿಸಲು ಮಾನವ ಪ್ರಾಣ ಹಾನಿ ತಪ್ಪಿಸಲು ಅರಣ್ಯ ಇಲಾಖೆ ಮೂಲಕ ಕಾವೇರಿ ನದಿ ಬದಿಯಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ಬ್ಯಾರಿಕೇಡ್ ಯೋಜನೆ ಕಾಮಗಾರಿ ಇದೀಗ ಸ್ಥಗಿತಗೊಂಡಿದ್ದು, ಕುಶಾಲನಗರದ ಸಮೀಪ ರಸಲ್ ಪುರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯಿಂದ ರೈತಾಪಿ ವರ್ಗ ಕಂಗೆಡುವAತಾಗಿದೆ. ಈ ಹಿಂದಿನ ಸರಕಾರ ಯೋಜನೆಗಾಗಿ ರೂ. ೧೦ ಕೋಟಿ ಮಂಜೂರು ಮಾಡಿದ್ದು ಈ ಹಣವನ್ನು ಹಿಂತಿರುಗಿಸುವAತೆ ಈಗಿನ ನೂತನ ಸರಕಾರ ಆದೇಶಿಸಿರುವುದಾಗಿ ತಿಳಿದುಬಂದಿದೆ.

ಸಿದ್ದಾಪುರದ ಸಮೀಪ ಬರಡಿಯಿಂದ ಪ್ರಾರಂಭಗೊAಡು ವಾಲ್ನೂರು ನಂಜರಾಯಪಟ್ಟಣ ರಂಗಸಮುದ್ರವರೆಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಸರಕಾರ ಬದಲಾದ ಬೆನ್ನಲ್ಲೇ ಸರ್ಕಾರದ ಹಲವು ಕಾಮಗಾರಿಗಳು ಸ್ಥಗಿತಗೊಂಡು ಕಾಮಗಾರಿಗೆ ಮೀಸಲಾದ ಅನುದಾನಗಳು ವಾಪಸ್ ಹೋಗಿದ್ದು ಇದರಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಳ್ಳಲು ಕಾರಣವಾಗಿದೆ ಎನ್ನಲಾಗಿದೆ.

ಈಗಾಗಲೇ ರೈಲ್ವೆ ಬ್ಯಾರಿಕೇಡ್‌ಗಳನ್ನು ನೆಲೆಗೊಳಿಸಲು ಗುಂಡಿಗಳನ್ನು ತೆಗೆೆಯಲಾಗಿದೆ. ಒಂದು ಕಿ.ಮೀ. ಅಂತರಕ್ಕೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ರೂ. ೧.೫ ಕೋಟಿ ವೆಚ್ಚ ಬೀಳುತ್ತದೆ. ಈ ದರದಲ್ಲಿಯೇ ಸರಕಾರ ಅತ್ತೂರಿನಿಂದ ಹಾರಂಗಿವರೆಗೆ ೬.೫ ಕಿ.ಮೀ. ಅಂತರಕ್ಕೆ ಬ್ಯಾರಿಕೇಡ್ ಅಳವಡಿಸಲು ಹಣ ಮಂಜೂರು ಮಾಡಿತ್ತು. ಸುಮಾರು ೪೪೮ ಕಂಬಗಳನ್ನು ಈಗಾಗಲೇ ನೆಲೆಗೊಳಿಸಲಾಗಿದೆ. ೬೦೦ಕ್ಕೂ ಅಧಿಕ ಗುಂಡಿಗಳನ್ನು ತೆಗೆಯಲಾಗಿದೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಈಗಿನ ಸರಕಾರ ಯೋಜನೆಯನ್ನು ಸ್ಥಗಿತಗೊಳಿಸಿ ಮಂಜೂರಾದ ಹಣವನ್ನು ಹಿಂತಿರುಗಿಸಲು ಸೂಚಿಸಿರುವುದು ಅರಣ್ಯ ಉಸ್ತುವಾರಿ ವಲಯದಲ್ಲಿ ಆಘಾತ ಮೂಡಿಸಿದೆ. ರೈತರಿಗೆ, ಬೆಳೆಗಾರರಿಗೆ ನೇರ ಹೊಡೆತ ನೀಡಿದಂತಾಗಿದೆ.

ಗುಡ್ಡೆಹೊಸೂರು ಸಮೀಪದ ರಸಲ್‌ಪುರ ವ್ಯಾಪ್ತಿಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಈ ವ್ಯಾಪ್ತಿಯಲ್ಲಿ ಆನೆಗಳು ದಾಟುವ ಮೂಲಕ ಈ ಭಾಗದ ಬೆಳೆಗಳು ಹಾನಿಗೆ ಒಳಗಾಗುತ್ತಿವೆ.

ಇದೇ ಭಾಗದಲ್ಲಿ ಆನೆ ಕಾರಿಡಾರ್ ಯೋಜನೆಗೆ ಕೂಡ ಪ್ರಸ್ತಾಪ ಮಾಡಲಾಗಿತ್ತು. ಕಾರಣಾಂತರದಿAದ ಈ ಯೋಜನೆ ಇದೀಗ ನೆನೆಗುದಿಗೆ ಬಿದ್ದಿದೆ.

ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರು ಸ್ಥಳದಲ್ಲಿರುವ ಸಾಮಗ್ರಿಗಳನ್ನು ವಾಪಸ್ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಪಿರಿಯಾಪಟ್ಟಣ ಅರಣ್ಯ ಭಾಗದಿಂದ ನದಿ ದಾಟಿ ಕೊಡಗು ಜಿಲ್ಲೆಯ ಅತ್ತೂರು ಆನೆಕಾಡು ಮೀಸಲು ಅರಣ್ಯಗಳ ಮೂಲಕ ಪ್ರವೇಶ ಮಾಡುತ್ತಿರುವ ಆನೆಗಳ ರಹದಾರಿ ಇದಾಗಿದೆ.

ಇದೀಗ ಅರ್ಧಕ್ಕೆ ಕಾಮಗಾರಿ ನಿಂತಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತಾಪಿ ವರ್ಗ ಕಾಡಾನೆಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಈ ಭಾಗದ ಕೃಷಿಕರಾದ ನಂಗಾರು ಜಗ ತಿಳಿಸಿದ್ದಾರೆ. ಕಾವೇರಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಕಂಬಿಗಳ ಬೇಲಿ ಕಾಮಗಾರಿ ಕೆಲವು ಕಡೆ ಕಳಪೆಯಿಂದ ಕೂಡಿದ್ದು ಕಾಡಾನೆಗಳು ಕಬ್ಬಿಣದ ಬೇಲಿಯನ್ನು ಮುರಿದು ತೋಟ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

ಸರ್ಕಾರ ಕೂಡಲೇ ಗಮನ ಹರಿಸಿ ಈ ಭಾಗದ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಸರಕಾರದಿಂದ ಅನುಮೋದನೆ ಗೊಂಡಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕಾಗಿದೆ.