ಮಡಿಕೇರಿ, ಜು. ೧೪: ವೀರಾಜಪೇಟೆ ತಾಲೂಕಿನ ಚಾಮಿಯಾಲ, ಮೈತಾಡಿ ಹಾಗೂ ದೇವಣಗೇರಿ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿತೋಟ ದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಬೆಳೆಗಳನ್ನು ನಾಶಪಡಿಸುತ್ತಿದೆ.
ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಕಾಫಿ ತೋಟಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಬೆಳೆಗಾರರು ಬೆಳೆದ, ಅಡಿಕೆ, ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸುತ್ತಿವೆ.
ಚಾಮಿಯಾಲ ಗ್ರಾಮದ ಬೆಳೆಗಾರರಾದ ಅಷ್ಫಾಕ್ ಕೆ.ಎ ಹಾಗೂ ಸಣ್ಣುವಂಡ ಅಪ್ಪಚ್ಚು ಅವರ ತೋಟದಲ್ಲಿ ದಾಂಧಲೆ ನಡೆಸಿರುವ ಕಾಡಾನೆಗಳು ಬಾಳೆಗಿಡ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯವರು ನೆಪಮಾತ್ರಕ್ಕೆ ಕಾಡಾನೆಗಳನ್ನು ತೋಟಗಳಿಂದ ಕಾಡಿಗಟ್ಟುವ ಕಾರ್ಯಾಚರಣೆ ಮಾಡುತ್ತಿದೆ. ಕಾಡಿಗಟ್ಟಿರುವ ಕಾಡಾನೆಗಳು ಮತ್ತೆ ತೋಟದತ್ತ ಲಗ್ಗೆಯಿಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮನೆಯAಗಳಕ್ಕೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ಭಯದ ವಾತಾವರಣದಲ್ಲೇ ಈ ಭಾಗದ ಜನರು ಜೀವನ ನಡೆಸುತ್ತಿದ್ದಾರೆ. ಕಾಡಾನೆ ಭಯದಿಂದ ತೋಟ ಕೆಲಸಗಳಿಗೆ ತೆರಳಲು ಮಾಲೀಕರು, ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಆದಷ್ಟು ಬೇಗ ಕಾಡಿಗಟ್ಟಿ, ತೋಟಕ್ಕೆ ಬಾರದಂತೆ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.