ಅದೊಂದು ಕಾಲವಿತ್ತು., ಕನ್ನಡ ನಾಡಿನೊಳಗೊಂದಾದ ಪುಟ್ಟ ಕೊಡಗು ಜಿಲ್ಲೆ ಸಾಹಿತ್ಯದ ಬರಡು ಭೂಮಿ ಎಂದೇ ಕರೆಸಿಕೊಳ್ಳುತ್ತಿದ್ದ ಕಾಲವದು., ವಿಭಿನ್ನ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳಿಗೆ ಹೆಸರುವಾಸಿಯಾಗಿರುವ ಈ ಕೊಡಗು ಜಿಲ್ಲೆ ವಿಶ್ವದಲ್ಲೇ ಗಮನ ಸೆಳೆದಿದೆಯಾದರೂ ಕನ್ನಡದಲ್ಲಿ ಒಂಚೂರು ಹಿಂದುಳಿದ ಜಿಲ್ಲೆಯಾಗಿತ್ತು.., ಕನ್ನಡ ಮಾತನಾಡುವವರು ಒಂದಷ್ಟು ಮಂದಿ ಇದ್ದರಾದರೂ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡವರು ಅತಿ ವಿರಳ ಎಂದೇ ಹೇಳಬಹುದು.

ಆದರೀಗ..,

ಸಾಹಿತ್ಯಲೋಕದಲ್ಲಿ ಕೊಡಗು ಜಿಲ್ಲೆ ತನ್ನದೇ ಆದ ಛಾಪು ಮೂಡಿಸಿದೆ ಎಂದರೆ ತಪ್ಪಾಗಲಾರದು. ಇತಿಹಾಸ ಸೃಷ್ಟಿಸಿರುವ ಹಲವಾರು ಮಂದಿ ಸಾಹಿತ್ಯ ಕೃಷಿಯಲ್ಲಿ ಕೊಡಗಿನ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ. ಸಾಹಿತ್ಯದ ಬರಡು ಭೂಮಿಯೆಂಬ ಹೆಸರನ್ನು ಅಳಿಸಿಹಾಕಿ ಕೊಡಗಿನ ಹೆಸರನ್ನು ಸಾಹಿತ್ಯ ಭೂಪಟದಲ್ಲಿ ಅಚ್ಚೊತ್ತುವಂತೆ ಮಾಡಿದ್ದಾರೆ. ಇವರುಗಳು ಹಾಕಿಕೊಟ್ಟ ಹಾದಿಯಲ್ಲಿ ಇಂದಿಗೂ ಅನೇಕಾನೇಕ ಸಾಹಿತಿಗಳು, ಕವಿಗಳು, ಬರಹಗಾರರು ಸಾಗುತ್ತಿದ್ದು, ಸಾಹಿತ್ಯಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬರುತ್ತಿದ್ದಾರೆ. ಕೊಡಗಿನ ಸಾಹಿತಿಗಳು ರಚಿಸಿದ ಬರಹಗಳು ಎಲ್ಲೆಡೆ ಸುದ್ದಿಯೊಂದಿಗೆ ಸದ್ದು ಕೂಡ ಮಾಡಿವೆ., ಮಾಡುತ್ತಲೇ ಇವೆ. ಹಲವಷ್ಟು ಪ್ರಶಸ್ತಿ-ಪಾರಿತೋಷಕಗಳನ್ನು ಈ ಪುಟ್ಟ ಜಿಲ್ಲೆಯ ಮುಡಿಗೆ ಅರ್ಪಿಸಿದ್ದಾರೆ. ಇನ್ನೂ ಕೆಲವರ ಬರಹಗಳು ಅತ್ಯುತ್ತಮ ಎಂಬ ಹಣೆಪಟ್ಟಿ ಯೊಂದಿಗೆ ಪ್ರತಿನಿತ್ಯ ಪಠಿಸುವಂತಹ ಅವಕಾಶಗಳನ್ನೂ ಗಿಟ್ಟಿಸಿಕೊಂಡಿವೆ ಎಂದರೆ ಅದು ಕೊಡಗಿನ ಮಣ್ಣಿನ ಗುಣವೆಂದೇ ಹೇಳಬಹುದು..!

ಕೊಡಗಿನ ಜೀವಾಳವನ್ನು ಪ್ರತಿಬಿಂಬಿಸುವ ಪ್ರತಿನಿತ್ಯ ಗುನುಗುವ ಸಾಹಿತ್ಯಗಳಾಗಿವೆ ಎಂದರೆ ತಪ್ಪಾಗಲಾರದು. ಅವರುಗಳೆಲ್ಲ ಈಗ ಇತಿಹಾಸ., ಅವರುಗಳ ಸಾಲಿನಲ್ಲೇ ಇನ್ನಷ್ಟು ಮಂದಿ ಉದಯಿಸಿಕೊಂಡಿದ್ದಾರೆ. ಈ ಮಣ್ಣಿನಲ್ಲಿ ಜನಿಸಿ, ಸಾಹಿತ್ಯ ಕೃಷಿಯೊಂದಿಗೆ ಮನೆ ಮಾತಾಗಿರುವ ಕೆಲವರ ಬರಹಗಳು ಶಾಲಾ-ಕಾಲೇಜು ಪಠ್ಯದಲ್ಲಿ ಅನುಕ್ರಮಗೊಂಡಿದ್ದು, ಮಕ್ಕಳು ದಿನನಿತ್ಯ ಪಠಿಸುವಂತಹ ಭಾಗ್ಯ ದೊರೆತಿದೆ.

ಹಿಂದಿನಿAದಲೂ ಎಲ್ಲರಿಗೂ ತಿಳಿದಿರುವಂತೆ ಪಠ್ಯಪುಸ್ತಕದಲ್ಲಿ ಯಾರೋ ಬರೆದ ಪಾಠಗಳು ಅಡಕವಾಗಿರುತ್ತವೆ; ಅವುಗಳನ್ನೇ ಓದಿಕೊಂಡು ಬರುತ್ತಿದ್ದೇವೆ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಉತ್ತಮ ಸಾಹಿತಿಗಳ ಒಳ್ಳೆಯ ಕೃತಿಗಳನ್ನು ಅಳವಡಿಸಲಾಗುತ್ತದೆ ಎಂಬದು ಇದೀಗ ನಮ್ಮ ನಿಮ್ಮ ಮುಂದೆ ಇರುವ ಸಾಹಿತಿಗಳ ಬರಹಗಳು ಪುಸ್ತಕದಲ್ಲಿ ಬಂದಾಗಲೇ ಅರಿವಾಗಿದ್ದು. ಜಿಲ್ಲೆಯ ಸಾಹಿತಿಗಳಾದ ಕಿಗ್ಗಾಲು ಗಿರೀಶ್, ಸ್ಮಿತಾ ಅಮೃತ್‌ರಾಜ್, ಪುದಿಯನೆರವನ ರೇವತಿ ರಮೇಶ್ ಹಾಗೂ ಸುನಿತಾ ಲೋಕೇಶ್ ಸಾಗರ್ ಅವರುಗಳ ಬರಹಗಳು ಶಾಲಾ-ಕಾಲೇಜು ಪಠ್ಯ ಕ್ರಮದಲ್ಲಿ ಅಡಕವಾಗಿ ಮಕ್ಕಳಿಗೆ ಪಾಠವಾಗಿವೆ. ಅದರಲ್ಲೂ ಗಿರೀಶ್ ಅವರ ಮಕ್ಕಳ ಕವನ ಮಹಾರಾಷ್ಟç ರಾಜ್ಯದ ಪಠ್ಯಪುಸ್ತಕದಲ್ಲಿ ಸ್ಥಾನ ಪಡೆದಿರುವದು ಈ ಮಣ್ಣಿನ ಹೆಮ್ಮೆ ಎಂದೇ ಹೇಳಬಹುದು..!

ಬದುಕಿನ ಪಾಠ: ಇವರು ಕಿಗ್ಗಾಲು ಗಿರೀಶ್., ಮೂರ್ನಾಡು ಬಳಿಯ ಕಿಗ್ಗಾಲು ಗ್ರಾಮದವರು. ವಾಯುಸೇನೆಯ ನಿವೃತ್ತ ಸಾರ್ಜೆಂಟ್. ದೇಶ ಸೇವೆಯೊಂದಿಗೆ ಸಾಹಿತ್ಯ ಸೇವೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಹಲವಷ್ಟು ಕೃತಿಗಳನ್ನು ರಚಿಸಿದ್ದಾರೆ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಸ್ಥಾನವನ್ನೂ ಅಲಂಕರಿಸಿದ್ದಾರೆ. ಹಲವಾರು ಲೇಖನ, ಕವನಗಳು ಇವರ ಲೇಖನಿಯಿಂದ ಮೂಡಿಬಂದಿವೆ. ಭಾಮಿನಿ ಷಟ್ಪದಿ ಯಂತಹ ಸುಪ್ರಭಾತಗಳನ್ನೂ ರಚಿಸುತ್ತಿರುವ ಇವರ ಮಕ್ಕಳ ಕವನಗಳು ಕೂಡ ಜನಪ್ರಿಯತೆ ಗಳಿಸಿವೆ. ಇವರು ರಚಿಸಿರುವ ಮಕ್ಕಳ ಕವನವೊಂದು ಮಹಾರಾಷ್ಟç ರಾಜ್ಯದ ಕನ್ನಡ ಪಠ್ಯ ಪುಸ್ತಕದಲ್ಲಿ ಅಡಕವಾಗಿದೆ. ೨೦೧೭ರ ನವೆಂಬರ್ ೧೪ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ರಚನೆ ಮಾಡಿದ್ದ ‘ಬದುಕಿನ ಪಾಠ’ ಕವನವನ್ನು ಗಿರೀಶ್ ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಇದನ್ನು ಮಹಾರಾಷ್ಟç ರಾಜ್ಯ ಪಠ್ಯ ಪುಸ್ತಕ ನಿರ್ಮಿತಿ ಮತ್ತು ಅಭ್ಯಾಸ ಕ್ರಮ ಸಂಶೋಧನೆ ಮಂಡಳಿ, ಪುಣೆ ಇವರು ಗಮನಿಸಿ ಐದನೇ ತರಗತಿಯ ಕನ್ನಡ ಬಾಲಭಾರತಿ ಪುಸ್ತಕದಲ್ಲಿ ಪ್ರಕಟಿಸಿದೆ. ೨೦೧೯ರಲ್ಲಿ ಇದು ಪ್ರಕಟವಾಗಿದೆಯಾದರೂ ಗಿರೀಶ್ ಅವರ ಗಮನಕ್ಕೆ ಬಂದೇ ಇರಲಿಲ್ಲ. ಪುಸ್ತಕ ಮಂಡಳಿಯ ಯಾರೋ ಒಬ್ಬರು ಕರೆ ಮಾಡಿ ಹೇಳಿದ ನಂತರ ಅವರಿಗೆ ಗೊತ್ತಾಗಿದಂತೆ. ಆದರೆ ಇದೊಂದು ನನ್ನ ಪಾಲಿನ ಅಮೂಲ್ಯ ಆಸ್ತಿಯೆಂದು ಗಿರೀಶ್ ಹೇಳುತ್ತಾರೆ.

ಒಂದು ಖಾಲಿ ಜಾಗ: ಕೃಷಿಯೊಂದಿಗೆ ಭಾಷಾ ಪಾಂಡಿತ್ಯಕ್ಕೆ ಹೆಸರುವಾಸಿಯಾದ ಪ್ರದೇಶ ಜಿಲ್ಲೆಯ ಗಡಿಭಾಗವಾದ ಸಂಪಾಜೆ. ಈ ಭಾಗದ ಚೆಂಬು ಗ್ರಾಮದಲ್ಲಿ ವಾಸವಿರುವವರು ಸ್ಮಿತಾ ಅಮೃತ್‌ರಾಜ್. ಗೃಹಿಣಿಯಾಗಿದ್ದು ಕೊಂಡು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಆದ ಛಾಪುಮೂಡಿಸಿದವರು. ಜಿಲ್ಲೆ, ರಾಜ್ಯ, ರಾಷ್ಟçಮಟ್ಟದಲ್ಲೂ ಗುರುತಿಸಿಕೊಂಡು ಪ್ರಶಸ್ತಿ ಯನ್ನು ತಮ್ಮ ಮುಡಿಗೇರಿಸಿ ಕೊಂಡವರು. ಕೊಡಗು ಜಿಲ್ಲೆಯ ಅವಿಸ್ಮರಣೀಯ ಕತೆಗಾರ್ತಿ ಕೊಡಗಿನ ಗೌರಮ್ಮ ಅವರ ಹೆಸರಿನಲ್ಲಿ ಕೊಡಮಾಡುವ ಪ್ರತಿಷ್ಠಿತ ಕೊಡಗಿನ ಗೌರಮ್ಮ ಪ್ರಶಸ್ತಿ ಇವರ ಹಿರಿಮೆಯನ್ನು ಹೆಚ್ಚಿಸಿದೆ. ಸಾಕಷ್ಟು ಬರಹಗಳು ಜಿಲ್ಲೆ ಹಾಗೂ ರಾಜ್ಯಮಟ್ಟದ ಪತ್ರಿಕೆ, ಪುಸ್ತಕಗಳಲ್ಲಿ ಪ್ರಕಟವಾಗಿವೆ. ಕೃತಿಗಳನ್ನೂ ಹೊರತಂದಿದ್ದಾರೆ. ಇವರು ಬರೆದಂತಹ ಎರಡು ಬರಹ ಗಳು ಮಂಗಳೂರು ವಿಶ್ವ ವಿದ್ಯಾಲಯದ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿವೆ. ವಾಣಿಜ್ಯ ಮಂಗಳ-೨ರ ಪ್ರಥಮ ಬಿಕಾಂ, ಕನ್ನಡ ದ್ವಿತೀಯ ಚತುರ್ಮಾಸದ ದೇಸಿಯತೆ ವಿಭಾಗದಲ್ಲಿ ‘ಒಂದು ಖಾಲಿ ಜಾಗ’ ಎಂಬ ವಿಷಯ ಪಠ್ಯದಲ್ಲಿ ಅಡಕಗೊಂಡಿದೆ.

ಭಾವಚಿತ್ರಗಳ ಭಾವನಾಲೋಕ ದಲ್ಲಿ : ಮಂಗಳೂರು ವಿವಿಯ ಕಲಾ ಗಂಗೋತ್ರಿಯ ದ್ವಿತೀಯ ಬಿಎ, ಬಿಎಸ್‌ಡಬ್ಲೂö್ಯ, ಬಿಎ (ಹೆಚ್‌ಆರ್‌ಡಿ) /ಬಿಎ(ಎಸ್‌ಡಿಎಸ್) ಕನ್ನಡ ಚತುರ್ಮಾಸ ಗಧ್ಯಭಾಗ ಪಠ್ಯದಲ್ಲಿ ಸ್ಮಿತಾ ಅವರ ಮತ್ತೊಂದು ಬರಹ ‘ಭಾವಚಿತ್ರಗಳ ಭಾವನಾಲೋಕದಲ್ಲಿ’ ಸೇರ್ಪಡೆಯಾಗಿದೆ. ಜಿಲ್ಲೆಯ ಓರ್ವ ಲೇಖಕಿಯ ಎರಡು ವಿಷಯಗಳು ವಿಶ್ವ ವಿದ್ಯಾಲಯದ ಪಠ್ಯದಲ್ಲಿ ಅಡಕವಾಗಿರುವದು ಹೆಮ್ಮೆಯ ವಿಚಾರವೇ ಸರಿ.

ಕಲ್ಲುಮೊಟ್ಟೆ : ಮೂಲ ಮಾತೃಭಾಷೆ ಮಲಯಾಳಂ ಆದರೂ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವವರು ಸುನಿತಾ ಲೋಕೇಶ್ ಸಾಗರ್. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಅವರ ಪತ್ನಿ ಸುನಿತಾ ಅವರು ವೃತ್ತಿಯಲ್ಲಿ ಶಿಕ್ಷಕಿ. ನಂಜರಾಯ ಪಟ್ಟಣ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾ ಸಾಹಿತ್ಯ ಲೋಕದಲ್ಲಿಯೂ ಸಾಧನೆ ಮಾಡುತ್ತಿರುವ ಇವರ ಒಂದು ಕತೆ ಒಂದಷ್ಟು ಮಕ್ಕಳಿಗೆ ಪಾಠವಾಗಿ ಪರಿಗಣನೆಯಾಗಿದೆ. ಹಲವಷ್ಟು ಕೃತಿಗಳ ರಚನೆಯೊಂದಿಗೆ ಜಿಲ್ಲೆ ಹಾಗೂ ರಾಜ್ಯಮಟ್ಟ ದಲ್ಲೂ ಗುರುತಿಸಿಕೊಂಡಿರುವ ಇವರಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದು, ಕೊಡಗಿನ ಗೌರಮ್ಮ ಪ್ರಶಸ್ತಿ ಕೂಡ ಅದರಲ್ಲಿ ಸೇರಿಕೊಂಡಿದೆ. ಕನ್ನಡದೊಂದಿಗೆ ಮಲಯಾಳಂ ಸಾಹಿತ್ಯದಲ್ಲಿಯೂ ತೊಡಗಿಸಿಕೊಂಡಿರುವ ಇವರ ‘ಕಲ್ಲುಮೊಟ್ಟೆ’ ಎಂಬ ಕತೆ ಮಂಗಳೂರು ವಿವಿಯ ವಾಣಿಜ್ಯ ಗಂಗೋತ್ರಿ-೩ರ ದ್ವಿತೀಯ ಬಿಕಾಂ, ಕನ್ನಡ ತೃತೀಯ ಚತುರ್ಮಾಸ ವಿಭಾಗದ ಗದ್ಯಭಾಗದಲ್ಲಿ ಪಠ್ಯವಾಗಿ ಸೇರ್ಪಡೆಯಾಗಿದೆ.

ಅಮರಸುಳ್ಯ ದಂಗೆ : ಶಿಕ್ಷಕಿಯಾಗಿ ಸರಕಾರದ ನಲಿ ಕಲಿ ಯೋಜನೆ ಜಾರಿಗೆ ಬರುವ ಮುನ್ನವೇ ಮಕ್ಕಳಿಗೆ ಪಾಠದೊಂದಿಗೆ ಆಟೋಟ., ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇರ್ಪಣೆ ನೀಡುವದರೊಂದಿಗೆ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರುವಲ್ಲಿ ತೊಡಗಿಸಿಕೊಂಡಿದ್ದವರು ಪುದಿಯನೆರವನ ರೇವತಿ ರಮೇಶ್ ಅವರು. ಮಡಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕಿ ಯಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಿಲ್ಲಾ, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿರುವ ಇವರ ಸೇವಾವಧಿಯಲ್ಲಿ ಇವರ ಪ್ರಯತ್ನದಿಂದ ರೂ.೧.೩೦ಕೋಟಿ ವೆಚ್ಚದ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿದೆ. ಮುಖ್ಯ ಶಿಕ್ಷಕಿ ಯಾಗಿ ನಿವೃತ್ತರಾಗಿರುವ ಇವರ ಪ್ರಯತ್ನದಿಂದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಆರನೇ ತರಗತಿಯ ಆಂಗ್ಲ ಮಾಧ್ಯಮದ ಸೋಶಿಯಲ್ ಸೈನ್ಸ್ ಪಠ್ಯ ಪುಸ್ತಕÀದಲ್ಲಿ ಸ್ವಾತಂತ್ರö್ಯ ಸಂಗ್ರಾಮದ ‘ಅಮರ ಸುಳ್ಯ ದಂಗೆ’ ವಿಷಯ ಪಠ್ಯವಾಗಿ ಸೇರ್ಪಡೆಯಾಗಿದೆ. ಇವರು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಸದಸ್ಯರಾಗಿದ್ದಾಗ ಈ ವಿಷಯವನ್ನು ಸೇರ್ಪಡೆಗೊಳಿಸ ಲಾಗಿದ್ದು, ಪ್ರಥಮ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ, ಪುಟ್ಟಬಸಪ್ಪ, ಕಲ್ಯಾಣಸ್ವಾಮಿ ಅವರುಗಳ ಹೋರಾಟದ ವಿಚಾರಗಳನ್ನು ಉಲ್ಲೇಖಿಸಲಾಗಿದೆ.

ಕೊಡಗು ಜಿಲ್ಲೆಯ ಈ ಸಾಹಿತಿಗಳ ಬರಹಗಳು ಪಠ್ಯ ಪುಸ್ತಕಗಳಲ್ಲಿ ಸೇರ್ಪಡೆಯಾಗಿರುವದು ನಾಡಿನ ಸಾರಸ್ವತ ಲೋಕಕ್ಕೆ ಹೆಮ್ಮೆಯ ವಿಚಾರವಾಗಿದೆ. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಇಂತಹವರು ಪ್ರೇರಣೆ ಯಾಗಲಿ ಎಂದು ಹಾರೈಸೋಣ.

?ಕುಡೆಕಲ್ ಸಂತೋಷ್