ಅಶೋಕ್ ಸಂಗಪ್ಪ

ವೀರಾಜಪೇಟೆ, ಜು. ೧೩: ಶಿಕ್ಷಣ ಸಂಸ್ಥೆಗಳ ಕೆಲಸ ಕೇವಲ ಶಿಕ್ಷಣ ಕಲಿಸುವುದರಲ್ಲಿ ಸೀಮಿತವಾಗ ಬಾರದು. ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯನ್ನು ಮುಂದಿರಿಸಿ ಶಿಕ್ಷಣ ನೀಡುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಅಶೋಕ್ ಸಂಗಪ್ಪ ಆಲೂರ ಹೇಳಿದರು.

ಅವರು ವೀರಾಜಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಕಳೆದ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಗುಣಮಟ್ಟದ ವಿಚಾರದಲ್ಲಿ ಯಾವುದೇ ತರಹದ ಹೊಂದಾಣಿಕೆ ಅಥವಾ ರಾಜಿಗೆ ತಯಾರಾಗಬಾರದು. ಮುಂದಿನ ಪೀಳಿಗೆಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವ ನೂತನ ಪಠ್ಯ ಕ್ರಮವನ್ನು ಪರಿಚಯಿಸಬೇಕು. ಪ್ರಸಕ್ತ ದಿನಗಳಲ್ಲಿ ಶಿಕ್ಷಕ ಸಿಬ್ಬಂದಿಗಳಿಗೂ ಕಾಲಾನುಸಾರ ತರಬೇತಿಯ ಅಗತ್ಯವಿದ್ದು, ಕೊಡಗು ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟ ಪದವಿ ಕಾಲೇಜುಗಳ ಶಿಕ್ಷಕರುಗಳ ಹಿತ ದೃಷ್ಟಿಯಿಂದ ಸಿಬ್ಬಂದಿಗಳ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಪ್ರಾರಂಭಿಸುವ ಉದ್ದೇಶವಿದೆ ಎಂದರು.

ಕೊಡಗು ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಕುಶಾಲನಗರ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಶೀನಪ್ಪ, ಮೈಸೂರಿನ ಮಹಾರಾಣಿ ಕಾಲೇಜಿನ ಗೋವಿಂದರಾಜ್, ನಾಗರಾಜ ಮೂರ್ತಿ, ಉದ್ಯಮಿಗಳಾದ ಮುಹಮ್ಮದ್ ಹನೀಫ್ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕಿ ರಾಖಿ ಪೂವಣ್ಣ ವೇದಿಕೆಯಲ್ಲಿದ್ದರು. ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪಠ್ಯೇತರ ಚಟುವಟಿಕೆಗಳ ಕಳೆದ ಸಾಲಿನ ವರದಿಯನ್ನು ವಾಚಿಸಿದರು. ರಘುರಾಜ್ ಸ್ವಾಗತಿಸಿದರು. ಕಿಶೋರ್ ನಿರೂಪಿಸಿದರು.