ವೀರಾಜಪೇಟೆ, ಜು. ೧೩: ಮಡಿಕೇರಿ ನಗರಸಭಾ ಸದಸ್ಯ ಹಾಗೂ ಮಡಿಕೇರಿ ಕೊಡವ ಸಮಾಜದ ನಿರ್ದೇಶಕ ಕಾಳಚಂಡ ಅಪ್ಪಣ್ಣ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ವೀರಾಜಪೇಟೆ ಕೊಡವ ಸಂಘಗಳ ಒಕ್ಕೂಟ ಖಂಡಿಸಿದೆ. ಅವರ ಮೇಲೆ ಹಲ್ಲೆ ನಡೆಸಿದವರನ್ನು ರೌಡಿ ಶೀಟರ್ ಆರೋಪದಡಿ ಜಿಲ್ಲೆಯಿಂದ ಗಡಿ ಪಾರು ಮಾಡಬೇಕು ಎಂದು ಕೊಡವ ಸಂಘಗಳ ಒಕ್ಕೂಟದ ಅಧ್ಯಕ್ಷ ಮೆಕೇರಿರ ರವಿ ಪೆಮ್ಮಯ್ಯ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಓರ್ವ ಜನಪ್ರತಿನಿಧಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಾಡಹಗಲೆ ಎಲ್ಲರ ಸಮ್ಮುಖದಲ್ಲಿ ನಡುರಸ್ತೆಯಲ್ಲಿ ಹಲ್ಲೆ ಮಾಡುತ್ತಾರೆ ಎಂದರೆ ಜನಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದರು.
ಒಕ್ಕೂಟದ ಸಮನ್ವಯ ಅಧಿಕಾರಿ ವಕೀಲ ಮಾದಂಡ ಪೂವಯ್ಯ ಮಾತನಾಡಿ ಎಲ್ಲಿಂದಲೋ ಬಂದು ನಮ್ಮ ಮಣ್ಣಿನಲ್ಲಿ ನೆಲೆ ನಿಂತು ಜಿಲ್ಲೆಯ ಮೂಲ ನಿವಾಸಿಗಳಾದ ಕೊಡವರು ಮತ್ತು ಕೊಡವ ಭಾಷಿಗರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ ಎಂದರು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಮಡಿಕೇರಿ ಕೊಡವ ಸಮಾಜ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಬಾಚಿರ ಜಗದೀಶ್, ಚಿಕ್ಕಪೇಟೆ ಕೊಡವ ಸಂಘದ ಅಧ್ಯಕ್ಷ ಅಮ್ಮಣಿಚಂಡ ರವಿ ಉತ್ತಪ್ಪ ಉಪಸ್ಥಿತರಿದ್ದರು.