ಪೊನ್ನಂಪೇಟೆ, ಜು. ೧೨: ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿ.ಬಾಡಗ ಗ್ರಾಮದಲ್ಲಿ ಎರಡು ಕಾಫಿತೋಟಗಳಲ್ಲಿ ಹುಲುಸಾಗಿ ಬೆಳೆದಿದ್ದ ಕಾಳುಮೆಣಸು ಬಳ್ಳಿಗಳನ್ನು, ಕಾಫಿ ಹಾಗೂ ತೆಂಗಿನಗಿಡಗಳನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ನಡೆದಿದೆ. ವಿ.ಬಾಡಗ ಗ್ರಾಮದ ಅಮ್ಮಣಿಚಂಡ ಡಾಲು ಕುಟ್ಟಪ್ಪ ಹಾಗೂ ಅಮ್ಮಣಿಚಂಡ ರಂಜು ಪೂಣಚ್ಚ ಎಂಬವರ ಕಾಫಿ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ದುಷ್ಕರ್ಮಿಗಳು ಫಸಲುಭರಿತ ಸುಮಾರು ೨೦ ರಿಂದ ೨೫ ಅಡಿ ಎತ್ತರಕ್ಕೆ ಬೆಳೆದು ನಿಂತಿದ್ದ ೨೫ ಕ್ಕೂ ಹೆಚ್ಚು ಕಾಳುಮೆಣಸು ಬಳ್ಳಿಗಳನ್ನು ಹಾಗೂ ನಾಲ್ಕು ಕಾಫಿ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಅಲ್ಲದೇ ಒಂದು ತೆಂಗಿನ ಗಿಡವನ್ನು ಎಳೆದು ಹಾಕಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳಕ್ಕೆ ವೀರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾತನಾಡಿದ ತೋಟದ ಮಾಲೀಕರಾದ ಅಮ್ಮಣಿಚಂಡ ರಂಜು ಪೂಣಚ್ಚ ಅವರು, ಶನಿವಾರ ರಾತ್ರಿ ಘಟನೆ ನಡೆದಿದ್ದು, ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಕಾಳುಮೆಣಸು ಹಾಗೂ ತೆಂಗಿನ ಗಿಡಗಳನ್ನು ಕತ್ತರಿಸಿ ಹಾಕಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.