ಗೋಣಿಕೊಪ್ಪಲು, ಜು. ೧೩: ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಉತ್ತಮ ರೀತಿಯ ಸ್ನೇಹಾಚಾರವನ್ನು ಮೈಗೂಡಿಸಿಕೊಂಡಲ್ಲಿ ಕಲಿಕೆಯಲ್ಲಿ ಸಹಾಯವಾಗಲಿದೆ. ಇದರಿಂದ ಉತ್ತಮ ಅಂಕ ಪಡೆಯಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಗುರುಗಳಿಗೆ ನೀಡುವ ಗೌರವದೊಂದಿಗೆ ಸ್ನೇಹಾಚಾರ ಕೂಡ ವೃದ್ಧಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ್ ಕಾಮತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗೋಣಿಕೊಪ್ಪಲುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರೌಢಶಾಲಾ ಹಂತದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ದಸಂಸವು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಇದರಿಂದ ಮಕ್ಕಳಿಗೆ ಶಾಲಾ ಹಂತದಲ್ಲಿ ಹೆಚ್ಚಿನ ಪ್ರೋತ್ಸಾಹ ಲಭಿಸಲಿದೆ. ಪ್ರತಿ ವಿದ್ಯಾರ್ಥಿಯಲ್ಲಿಯೂ ತಮ್ಮದೆ ಆದ ಸಾಮರ್ಥ್ಯವಿದೆ. ಇದನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಕಲಿಕಾ ಮಟ್ಟವನ್ನು ಪ್ರೌಢಶಾಲಾ ಹಂತದಲ್ಲಿಯೇ ರೂಢಿಸಿಕೊಳ್ಳಬೇಕೆಂದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲಾ ಶಿಕ್ಷಕರಿಗೆ ಸಂಘ ಸಂಸ್ಥೆಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ಕಲಿಕಾಮಟ್ಟವು ಹೆಚ್ಚಾಗಲಿದೆ. ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿಯು ಸಿಕ್ಕಿದಂತಾಗುತ್ತದೆ. ಇದರಿಂದ ಮಕ್ಕಳ ಶೈಕ್ಷಣಿಕ ಮಟ್ಟವು ಉತ್ತಮವಾಗಲಿದೆ ಎಂದು ದಸಂಸ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ೧೨ ವರ್ಷಗಳಿಂದ ದಸಂಸ ವತಿಯಿಂದ ೧೦ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತ ಬಂದಿದೆ. ಅಲ್ಲದೆ ಮಕ್ಕಳ ಕಲಿಕೆಯಲ್ಲಿ ಶ್ರಮಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುತ್ತಿದೆ, ಪ್ರಸ್ತುತ ಸಾಲಿನಲ್ಲಿ ಜಿಲ್ಲೆಯ ೪೪ ಪ್ರೌಢಶಾಲೆಗಳಲ್ಲಿಯೂ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸನ್ಮಾನದಿಂದ ವಿದ್ಯಾರ್ಥಿಗಳು ಸ್ಪೂರ್ತಿ ಪಡೆಯುವಂತಾಗಿದೆ. ಉಳಿದ ವಿದ್ಯಾರ್ಥಿಗಳಿಗೂ ಇದು ಪ್ರೋತ್ಸಾಹ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ದಸಂಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯ ಉದ್ದಗಲಕ್ಕೂ ಉತ್ತಮ ರೀತಿಯ ಪ್ರೋತ್ಸಾಹ ಲಭ್ಯವಾಗುತ್ತಿದೆ ಎಂದು ಹೇಳಿದರು.
ದಸಂಸ ವಿಭಾಗೀಯಮಟ್ಟದ ಸಂಚಾಲಕ ಎನ್. ವೀರಭದ್ರಯ್ಯ ಮಾತನಾಡಿ ಹಲವು ದಶಕಗಳ ಹಿಂದೆ ವಿದ್ಯಾಭ್ಯಾಸ ಪಡೆಯಲು ಕಷ್ಟದ ದಿನಗಳಿದ್ದವು. ಇದೀಗ ಇತ್ತೀಚಿನ ವರ್ಷಗಳಲ್ಲಿ ಅಂತಹ ವಾತಾವರಣಗಳು ಕಂಡು ಬರುತ್ತಿಲ್ಲ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು ಸರ್ಕಾರವು ಆ ನಿಟ್ಟಿನಲ್ಲಿ ಉತ್ತಮ ಸೌಲಭ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವ ಮೂಲಕ ಉತ್ತಮ ಶಿಕ್ಷಣ ಹೊಂದಬೇಕು. ಸಮಾಜದಲ್ಲಿ ಗಣ್ಯ ವ್ಯಕ್ತ್ತಿಗಳಾಗಿ ರೂಪುಗೊಳ್ಳಬೇಕು. ತಾವು ಕಲಿತ ಶಾಲೆಗೆ ಹಾಗೂ ಶಿಕ್ಷಕರಿಗೆ ಗೌರವ ತರುವಂತಹ ಕೆಲಸ ಮಾಡಬೇಕೆಂದರು.
ಸಭೆಯನ್ನು ಉದ್ದೇಶಿಸಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೊಣಿಯಂಡ ಬೋಜಮ್ಮ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್.ಕೆ. ಗಣೇಶ್ ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು.
ವೇದಿಕೆಯಲ್ಲಿ ದಸಂಸ ವೀರಾಜಪೇಟೆ ಸಂಘಟನಾ ಸಂಚಾಲಕ ಮೈತಾಡಿ ಮಣಿ, ಎಸ್‌ಡಿಎಂಸಿ ಸದಸ್ಯರಾದ ಪ್ರದೀಪ್, ದೇವರಾಜ್, ಸುಮಾವಸಂತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಪಿ. ಮಹೇಶ್ ಸ್ವಾಗತಿಸಿ, ಶಿಕ್ಷಕಿ ರೇವರಿ ನಿರೂಪಿಸಿ ಹೆಚ್.ವಿ. ಮಂಜುಳ ವಂದಿಸಿದರು.