ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ-ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು
ಬೆಂಗಳೂರು, ಜು. ೧೨: ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಬುಧವಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಬಿಜೆಪಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕಾಂಗ್ರೆಸ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಜೈನಮುನಿ ಹತ್ಯೆ ಕೇಸು ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಮನವಿ ಮಾಡಿದರು.
ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಜು. ೧೨: ಚೀನಾ ಆ್ಯಪ್ ಮೂಲಕ ಸಾಲ ಪಡೆದಿದ್ದ ವಿದ್ಯಾರ್ಥಿ ಟಾರ್ಚರ್ ತಾಳದೆ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಹೆಚ್ಎಂಟಿ ಕ್ವಾರ್ಟರ್ಸ್ನಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ತೇಜಸ್ ಎಂದು ಗುರುತಿಸಲಾಗಿದ್ದು, ಸ್ನೇಹಿತ ಮಹೇಶ್ಗಾಗಿ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟಕ್ ಮಹೀಂದ್ರಾ ಮೂಲಕ ಲೋನ್ ಪಡೆದಿದ್ದ. ಆದರೆ ಕಳೆದ ಒಂದು ವರ್ಷದಿಂದ ಸ್ನೇಹಿತ ಮಹೇಶ್ ಇಎಂಐ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋನ್ ಕೊಟ್ಟವರು ತೇಜಸ್ಗೆ ಇಎಂಐ ಕಟ್ಟುವಂತೆ ಟಾರ್ಚರ್ ನೀಡುತ್ತಿದ್ದರಂತೆ. ತೇಜಸ್ ಟಾರ್ಚರ್ ತಾಳದೆ ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ ೬ ಗಂಟೆ ಸುಮಾರಿಗೆ ತಾಯಿಯ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಥಳಿತ: ವಿದ್ಯಾರ್ಥಿನಿ ಆತ್ಮಹತ್ಯೆ
ರಾಂಚಿ, ಜು. ೧೨: ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕಿಯೊಬ್ಬರು ಥಳಿಸಿದ್ದು, ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಜಾರ್ಖಂಡ್ನ ಧನ್ಬಾದ್ನಲ್ಲಿ ಈ ಘಟನೆ ನಡೆದಿದ್ದು, ಹಣೆಗೆ ಬಿಂದಿ ಧರಿಸಿ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ಶಿಕ್ಷಕಿಯೊಬ್ಬರು ಥಳಿಸಿದ್ದಾರೆ. ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಿದ್ಯಾರ್ಥಿನಿಯ ಪೋಷಕರು ಹಾಗೂ ಸ್ಥಳೀಯರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿ, ಪೊಲೀಸರು ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಭಜರಂಗದಳದ ಸದಸ್ಯನ ಮೇಲೆ ಹಲ್ಲೆ ಆರೋಪ: ಮೂವರ ಬಂಧನ
ಲಖನೌ, ಜು. ೧೨: ಮತಾಂತರ ವಿರುದ್ಧ ಪ್ರಚಾರ ನಡೆಸುತ್ತಿದ್ದಾರೆ ಎಂದು ಭಜರಂಗದಳದ ಸದಸ್ಯನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಾದ್ರಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ ೧೦.೩೦ ರ ಸುಮಾರಿಗೆ ಕಾಕ್ರಿ ಗ್ರಾಮದಿಂದ ಬಂಜಾರಿಯಾಕ್ಕೆ ಹಿಂತಿರುಗುತ್ತಿದ್ದಾಗ ಪಾದ್ರಿ ಅನಿಲ್ ಮತ್ತಿತರರು ದೊಣ್ಣೆ ಮತ್ತು ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೀಪನ್ಶು ಶ್ರೀವಾಸ್ತವ ಅಲಿಯಾಸ್ ದೀಪಕ್ ನನ್ಪಾರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪವಿತ್ರಾ ಮೋಹನ್ ತ್ರಿಪಾಠಿ ತಿಳಿಸಿದ್ದಾರೆ. ದೀಪಕ್ ನೀಡಿರುವ ದೂರಿನ ಮೇರೆಗೆ ಅನಿಲ್, ರಾಮ್ ನಾರಾಯಣ್, ರೋಹಿತ್ ಮೌರ್ಯ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಐಪಿಸಿಯ ಸಂಬAಧಿತ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಎಸ್ಪಿ ಹೇಳಿದ್ದಾರೆ.ಎಫ್ಐಆರ್ನಲ್ಲಿ ಹೆಸರಿಸಲಾದ ಮೂವರನ್ನು ಬಂಧಿಸಲಾಗಿದೆ ಮತ್ತು ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬನನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸರಿಗೆ ಖಾರದ ಪುಡಿ ಎರಚಿ ಕೊಲೆ ಆರೋಪಿಗೆ ಗುಂಡಿಕ್ಕಿ ಹತ್ಯೆ
ಜೈಪುರ, ಜು. ೧೨: ರಾಜಸ್ಥಾನದ ಭರತ್ಪುರದಲ್ಲಿ ಕೊಲೆ ಆರೋಪಿಯನ್ನು ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ರಾಜಸ್ಥಾನ ರೋಡ್ವೇಸ್ ಬಸ್ಸಿನೊಳಗೆ ನುಗ್ಗಿದ ಸುಮಾರು ಹನ್ನೆರಡು ಜನರು ಗುಂಪು, ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಕೊಲೆ ಆರೋಪಿ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆತನ ಪರಿಸ್ಥಿತಿ ಗಂಭೀರವಾಗಿದೆ. ಪೊಲೀಸರ ಪ್ರಕಾರ, ಭರತ್ಪುರದ ಹಲೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಅಮೋಲಿ ಟೋಲ್ ಪ್ಲಾಜಾ ಬಳಿ ಕಾರು ಮತ್ತು ಎರಡು ಮೋಟಾರ್ ಬೈಕ್ಗಳಲ್ಲಿ ಬಂದ ಸುಮಾರು ೧೨ ಜನ, ಬಸ್ ಅನ್ನು ಅಡಗಟ್ಟಿ, ಬಸ್ಸಿನೊಳಗೆ ನುಗ್ಗಿ ಪೊಲೀಸರ ಮೇಲೆ ಖಾರದ ಪುಡಿ ಎರಚಿ, ಕೊಲೆ ಆರೋಪಿಗಳಾದ ಕುಲದೀಪ್ ಜಘೀನಾ ಮತ್ತು ವಿಜಯಪಾಲ್ ಮೇಲೆ ಗುಂಡು ಹಾರಿಸಿದ್ದಾರೆ. ಎಸ್ಎಲ್ಆರ್ ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತ ಹೆಡ್ ಕಾನ್ಸ್ಟೆಬಲ್ ನೇತೃತ್ವದ ಏಳು ಪೊಲೀಸರ ತಂಡ ೨೦೨೨ರ ಕೊಲೆ ಪ್ರಕರಣದ ಆರೋಪಿಗಳಾದ ಜಘೀನಾ ಮತ್ತು ವಿಜಯಪಾಲ್ ಅವರನ್ನು ಜೈಪುರದಿಂದ ಭರತ್ಪುರಕ್ಕೆ ಕರೆದೊಯ್ಯುತ್ತಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಕೊಲೆ ಆರೋಪಿಗಳನ್ನು ಭರತ್ಪುರದ ಆರ್ಬಿಎಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಜಘೀನಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆದರೆ ವಿಜಯಪಾಲ್ ಸ್ಥಿತಿ ಗಂಭೀರವಾಗಿದೆ ಎಂದು ಭರತ್ಪುರ ಎಸ್ಪಿ ಮೃದುಲ್ ಕಚ್ಚವಾ ಅವರು ಹೇಳಿದ್ದಾರೆ.
೨,೦೦೦ ಪ್ರವಾಸಿಗರನ್ನು ರಕ್ಷಿಸಲಾಗಿದೆ: ಹಿಮಾಚಲ ಸಿಎಂ
ಶಿಮ್ಲಾ/ಕುಲು, ಜು. ೧೨: ನಿರಂತರ ಮಳೆಯಿಂದಾಗಿ ಕುಲು ಜಿಲ್ಲೆಯ ಕಸೋಲ್ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು ೨,೦೦೦ ಪ್ರವಾಸಿಗರನ್ನು ರಕ್ಷಿಸಿ, ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಬುಧವಾರ ತಿಳಿಸಿದ್ದಾರೆ. ಲಾಹೌಲ್ನಲ್ಲಿ ಸಿಲುಕಿದ್ದ ೩೦೦ಕ್ಕೂ ಹೆಚ್ಚು ಪ್ರವಾಸಿ ವಾಹನಗಳು ಆಯಾ ಸ್ಥಳಗಳಿಗೆ ತೆರಳಿವೆ ಎಂದು ಹಿಮಾಚಲ ಸಿಎಂ ಹೇಳಿದ್ದಾರೆ. ಮಂಗಳವಾರ ಸಂಜೆ ಕುಲು-ಮನಾಲಿ ರಸ್ತೆ ತೆರೆಯಲಾಗಿದ್ದು, ಸುಮಾರು ೨,೨೦೦ ವಾಹನಗಳು ಕುಲು ದಾಟಿವೆ. ಕಳೆದ ಎರಡು ದಿನಗಳಿಂದ ಮನಾಲಿ ಮತ್ತು ಅದರ ಉಪನಗರಗಳಲ್ಲಿ ಹಲವಾರು ಪ್ರದೇಶಗಳಲ್ಲಿ ಮೊಬೈಲ್ ಸಿಗ್ನಲ್ ಇರಲಿಲ್ಲ ಮತ್ತು ಪ್ರವಾಸಿಗರು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಕಸೋಲ್ನಲ್ಲಿ ಸಿಲುಕಿದ್ದ ೨,೦೦೦ ಕ್ಕೂ ಹೆಚ್ಚು ಪ್ರವಾಸಿಗರನ್ನು ಸದ್ಯಕ್ಕೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ಕಸೋಲ್-ಭುಂಟರ್ ರಸ್ತೆಯಲ್ಲಿನ ಡುಂಖಾರಾ ಭೂಕುಸಿತವನ್ನು ತೆರವುಗೊಳಿಸಲು ನಮ್ಮ ತಂಡಗಳು ಅವಿರತವಾಗಿ ಶ್ರಮಿಸುತ್ತಿವೆ ಎಂದು ಅವರು ಹೇಳಿದ್ದಾರೆ.
೫ ಪಿ.ಎಫ್.ಐ. ಕಾರ್ಯಕರ್ತರು ದೋಷಿಗಳು ಎಂದ ಕೋರ್ಟ್
ಕೊಚ್ಚಿನ್, ಜು. ೧೨: ಕೇರಳದ ಪ್ರೊಫೆಸರ್ ಜೊಸೆಫ್ ಅವರ ಕೈ ಕತ್ತರಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಐದು ಮಂದಿ ಪಿ.ಎಫ್.ಐ. ಕಾರ್ಯಕರ್ತರ ವಿರುದ್ಧದ ಆರೋಪ ಸಾಬೀತಾಗಿದ್ದು, ಕೋರ್ಟ್ ದೋಷಿಗಳು ಎಂದು ತೀರ್ಪು ನೀಡಿದೆ. ಕೊಚ್ಚಿಯಲ್ಲಿರುವ ರಾಷ್ಟಿçÃಯ ತನಿಖಾ ದಳ ಕೋರ್ಟ್ ಐವರನ್ನು ದೋಷಿಗಳೆಂದು ತೀರ್ಪು ನೀಡಿದ್ದು, ಉಳಿದ ಐವರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆ ಮಾಡಿದೆ. ಪ್ರಕರಣದ ಎರಡನೇ ಹಂತದ ವಿಚಾರಣೆಯಲ್ಲಿ ವಿಶೇಷ ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ. ಭಾಸ್ಕರ್ ಅವರು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೊಲೆ ಯತ್ನ, ಪಿತೂರಿ ಮತ್ತು ಇತರ ವಿವಿಧ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದರು. ಅಂತೆಯೇ ಶಿಕ್ಷೆಯ ಪ್ರಮಾಣವನ್ನು ಮುಂದಿನ ವಿಚಾರಣೆಯಲ್ಲಿ ಘೋಷಿಸುವುದಾಗಿ ಕೋರ್ಟ್ ಹೇಳಿದೆ.