*ಗೋಣಿಕೊಪ್ಪ, ಜು. ೧೨: ಬುಡಕಟ್ಟು ಜನರ ಸಮಸ್ಯೆಗೆ, ಮಾನವ ವನ್ಯ ಪ್ರಾಣಿಗಳ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತಿತರಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ತಿಳಿಸಿದರು.
ಬುಧವಾರ ಪೊನ್ನಂಪೇಟೆ ತಹಶೀಲ್ದಾರ್ ಕಛೇರಿಗೆ ಭೇಟಿ ನೀಡಿದ ಅವರು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ ತಾಲೂಕಿನ ಸಾರ್ವಜನಿಕರಿಗೆ ತಾಲೂಕು ಕಚೇರಿಯಲ್ಲಿ ಒದಗಿಸಬೇಕಾದ ಸೇವೆಗಳ ವಿಚಾರದಲ್ಲಿ ವಿಸ್ತೃತವಾದ ಚರ್ಚೆಯನ್ನು ನಡೆಸಿದರು.
ಹಾಡಿಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ಮಾಹಿತಿಯನ್ನು ಪಡೆದು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.
ತಾಲೂಕಿನಲ್ಲಿ ಅರಣ್ಯದಲ್ಲಿ ಮಾನವ ಮತ್ತು ಪ್ರಾಣಿಗಳ ಸಂಘರ್ಷಗಳ ಸಮಸ್ಯೆಗಳ ಕುರಿತು ಮಾಹಿತಿಯನ್ನು ಪಡೆದು ಅವುಗಳ ಪರಿಹಾರದ ವಿಚಾರದಲ್ಲಿ ಸುದೀರ್ಘವಾಗಿ ಚರ್ಚಿಸಿದ ನಂತರ ಪೊನ್ನಂಪೇಟೆ ಪ್ರವಾಸಿ ಮಂದಿರ ಮತ್ತು ಹಾಕಿ ಕ್ರೀಡಾಂಗಣವನ್ನು ಪರಿಶೀಲಿಸಿದರು. ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಅವರು ಇದ್ದರು.