ಗೋಣಿಕೊಪ್ಪಲು, ಜು.೧೨: ಮುಂಜಾನೆ ವೇಳೆ ದೈನಂದಿನ ಕೂಲಿ ಕೆಲಸಕ್ಕೆ ವಾಹನದಲ್ಲಿ ತೆರಳುತ್ತಿದ್ದ ಕಾರ್ಮಿಕರ ವಾಹನ ಹಾಗೂ ಶಾಲಾ ವಿದ್ಯಾರ್ಥಿನಿಯರು ಇದ್ದ ವಾಹನಕ್ಕೆ ಎದುರಾದ ಕಾಡಾನೆಯು ಓಮಿನಿ ವ್ಯಾನ್ ಹಾಗೂ ಮಾರುತಿ ಇಕೋ ವಾಹನಗಳ ಮೇಲೆ ದಾಳಿ ನಡೆಸಿದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಾಲೆಗೆ ತೆರಳುವ ಅರಣ್ಯದ ರಸ್ತೆಯಲ್ಲಿ ನಡೆದಿದೆ.

ಕಾಡಾನೆ ದಾಳಿಯಿಂದ ಮುಂಬದಿ ಸೀಟಿನಲ್ಲಿದ್ದ ವಿದ್ಯಾರ್ಥಿನಿಗೆ ಗಾಯವಾಗಿ ತಿತಿಮತಿ ಆಸ್ಪತ್ರೆ ಸೇರಿದ್ದಾಳೆ. ಯುವತಿಗೆ ಯಾವುದೇ ತೀವ್ರ ರೀತಿಯ ತೊಂದರೆ ಇಲ್ಲ. ಘಟನಾ ಸ್ಥಳಕ್ಕೆ ಮತ್ತಿಗೋಡು ಅರಣ್ಯ ವಲಯ ಅರಣ್ಯ ಅಧಿಕಾರಿಗಳಾದ ದಿಲೀಪ್ ಕುಮಾರ್ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು. ತಿತಿಮತಿ ಆಸ್ಪತ್ರೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಎರಡು ಕಾರುಗಳಿಗೆ ಕಾಡಾನೆಯು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಾನಿಯಾದ ವಾಹನ ಗಳಿಗೆ ಸರ್ಕಾರದ ನಿಯಮದಂತೆ ಪರಿಹಾರ ವಿತರಿಸುವ ಭರವಸೆ ನೀಡಿದರು.

ದೊಡ್ಡ ರೇಷ್ಮೆಯ ಜೇನು ಕುರುಬರ ಮಣಿ ಎಂಬವರ ಮಗಳು ಪೊನ್ನಂಪೇಟೆ ಸಾಯಿಶಂಕರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದು ತಂದೆ ಮಣಿ ತಮ್ಮ ಇಕೋ ವಾಹನದಲ್ಲಿ ಮಗಳನ್ನು ಕಾಲೇಜಿಗೆ ಕರೆ ತರುತ್ತಿದ್ದರು. ತಿತಿಮತಿ ಸಮೀಪದ ಮರದ ಡಿಪೋ ಮುಂಭಾಗ ಬರುತ್ತಿದ್ದ ವೇಳೆ ತನ್ನ ಮರಿಯೊಂದಿಗೆ ಇದ್ದ ಕಾಡಾನೆಯು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮುಂದಿನ ಸೀಟ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಸುಚಿತ್ರಳಿಗೆ ಕಾರಿನ ಗಾಜು ತಗುಲಿ ಎದೆಯ ಭಾಗಕ್ಕೆ ಗಾಯಗಳಾಗಿವೆ.

(ಮೊದಲ ಪುಟದಿಂದ) ಬಳಿಕ ಕಾರಿನಿಂದ ಹೊರ ಬಿದ್ದ ವೇಳೆ ಕಾಲಿನ ಭಾಗಕ್ಕೆ ಗಾಯವಾಗಿದೆ. ತಿತಿಮತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ವಿದ್ಯಾರ್ಥಿನಿಯನ್ನು ಕಾಲೇಜಿಗೆ ಕರೆದೊಯ್ಯಲಾಯಿತು. ಮಧ್ಯಾಹ್ನದ ವೇಳೆ ಎದೆ ಹಾಗೂ ಕಾಲಿಗೆ ತೀವ್ರ ತರದ ನೋವು ಕಾಣಿಸಿಕೊಂಡು ಆಕೆಯನ್ನು ಶಾಲೆಯ ಅಧ್ಯಾಪಕರು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು.

ಮಾಹಿತಿ ತಿಳಿದ ಕೆಪಿಸಿಸಿ ರಾಜ್ಯವಕ್ತಾರರಾದ ಮೇರಿಯಂಡ ಸಂಕೇತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ದೂರವಾಣಿಯ ಮೂಲಕ ಕಾಲೇಜು ವಿದ್ಯಾರ್ಥಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ತೊಂದರೆ ನೀಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿವ ಬಗ್ಗೆ ಭರವಸೆ ನೀಡಿದರು.

ಕಾಡಾನೆ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕರೆ ತರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಹಾಡಿಯಿಂದ ತಿತಿಮತಿವರೆಗೆ ವಾಹನ ಸೌಲಭ್ಯ ಮಾಡಿಕೊಡುವಂತೆ ಯುವತಿಯ ತಂದೆಯಾದ ಮಣಿ ಮಾಧ್ಯಮದ ಮೂಲಕ ಒತ್ತಾಯಿಸಿದರು. ಹಾನಿಗೊಳಗಾದ ವಾಹನವನ್ನು ಇಲಾಖೆ ವತಿಯಿಂದ ಸರಿಪಡಿಸಿಕೊಡುವಂತೆ ಇದೇ ವೇಳೆ ಇಲಾಖೆಗೆ ಮನವಿ ಮಾಡಿದರು. ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಪಾಲಿಬೆಟ್ಟ ತಿತಿಮತಿ ರಸ್ತೆಗೆ ಹೊಂದಿಕೊAಡಿರುವ ಹೆಬ್ಬಾಲೆ ಪಟ್ಟಣಕ್ಕೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ವಿಸ್ತಾರವಾದ ಮತ್ತಿಗೋಡು ರಾಷ್ಟಿçÃಯ ಅರಣ್ಯ ಪ್ರದೇಶವಿದ್ದು ಈ ಭಾಗದಲ್ಲಿ ನಿರಂತರ ಕಾಡಾನೆಗಳ ಸಂಚಾರವಿದೆ. ಮುಂಜಾನೆ ಹಾಗೂ ಸಂಜೆಯ ವೇಳೆಯಲ್ಲಿ ಅರಣ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕಾಡಾನೆಗಳು ತೆರಳುವುದು ಇಲ್ಲಿಯ ಸಹಜ ಪ್ರಕ್ರಿಯೆ. ಹೀಗಾಗಿ ಈ ಭಾಗದಲ್ಲಿ ಅರಣ್ಯ ಸಿಬ್ಬಂದಿಗಳು ಮುಂಜಾಗೃತ ಕ್ರಮವಾಗಿ ಕ್ಯಾಂಪ್ ಆರಂಭಿಸಿದ್ದು ಕಾಡಾನೆಗಳ ಚಲನವಲನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶದ ರೈತರ ಕಾಫಿ ತೋಟದಲ್ಲಿ ಕಾಡಾನೆಗಳ ಹಾವಳಿ ದಿನನಿತ್ಯದ ಸಮಸ್ಯೆಯಾಗಿ ಹಲವು ವರ್ಷಗಳಿಂದ ರೈತರನ್ನು ನಿರಂತರವಾಗಿ ಕಾಡುತ್ತಿದೆ. ಈ ಭಾಗದ ಸಂಪೂರ್ಣ ಅರಣ್ಯವು ರಾಷ್ಟಿçÃಯ ಅರಣ್ಯ ಪ್ರದೇಶವಾಗಿರುವುದರಿಂದ ಕಾಡಾನೆಗಳ ಸಂಚಾರವು ಸಹಜವಾಗಿದೆ.

-ಹೆಚ್.ಕೆ.ಜಗದೀಶ್ / ಎನ್.ಎನ್. ದಿನೇಶ್